ನವದೆಹಲಿ: ಟಾಟಾ ಮೋಟಾರ್ಸ್ ಹಾಗೂ ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿದ್ದ ಅಂದಿನ ಸಿಪಿಎಂ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಲ್ಲಿ ಭಾರಿ ಹಿನ್ನೆಡೆಯಾಗಿದ್ದು, ನ್ಯಾನೊ ಕಾರು ತಯಾರಿಕಾ ಘಟಕ ಸ್ಥಾಪಿಸಲು ಟಾಟಾ ಮೋಟಾರ್ಸ್ ಕಂಪೆನಿಗೆ ಸಿಂಗೂರ್ ನಲ್ಲಿ ನೀಡಿದ್ದ ಭೂಮಿ ಒಪ್ಪಂದವನ್ನು ಕೋರ್ಟ್ ಬುಧವಾರ ರದ್ದುಪಡಿಸಿದೆ.
2006ರಲ್ಲಿ ಪಶ್ಚಿಮ ಬಂಗಾಳದ ಹಿಂದಿನ ಎಡಪಕ್ಷ ಸರ್ಕಾರ ಟಾಟಾ ಕಂಪನಿಗೆ 997 ಎಕರೆ ಭೂಮಿ ಮಂಜೂರು ಮಾಡಿತ್ತು. ಆದರೆ ಈ ಆದೇಶವನ್ನು ರದ್ದುಗೊಳಿಸಿರುವ ನ್ಯಾಯಮೂರ್ತಿ ವಿ.ಗೋಪಾಲ್ ಗೌಡ ಹಾಗೂ ನ್ಯಾಮೂರ್ತಿ ಅರುಣ್ ಮಿಶ್ರಾ ಅವರನ್ನೊಳಗೊಂಡ ಸುಪ್ರೀಂ ಪೀಠ, ಅಂದಿನ ಸರ್ಕಾರ ಭೂಸ್ವಾದೀನ ಪ್ರಕ್ರಿಯೆಯಲ್ಲಿ ನಿಯಮಾವಳಿಗಳನ್ನು ಪಾಲಿಸಿಲ್ಲ. ಹೀಗಾಗಿ ಆ ಭೂಮಿಯನ್ನು ರೈತರಿಗೆ ಹಿಂದಿರುಗಿಸುವಂತೆ ತೀರ್ಪು ನೀಡಿದೆ.
ಕಳೆದ 10 ವರ್ಷಗಳಿಂದ ಭೂಮಿ ಕಳೆದುಕೊಂಡು ನಷ್ಟ ಅನುಭವಿಸಿದ ರೈತರು ರಾಜ್ಯ ಸರ್ಕಾರ ನೀಡಿದ್ದ ಪರಿಹಾರದ ಹಣವನ್ನೂ ವಾಪಸ್ ನೀಡಬೇಕಾಗಿಲ್ಲ ಎಂದಿರುವ ಕೋರ್ಟ್, ಮುಂದಿನ 12 ವಾರಗಳಲ್ಲಿ ಭೂಮಿ ಮರಳಿಸುವಂತೆ ಆದೇಶಿಸಿದೆ.
ಇದರಿಂದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ಮಮತಾ ಬ್ಯಾನರ್ಜಿ ಅವರು ಸಿಂಗೂರ್ ನ್ಯಾನೊ ಕಾರು ಘಟಕ ಸ್ಥಾಪನೆಗೆ ವಿರೋಧಿ ತೀವ್ರ ಪ್ರತಿಭಟನೆ ನಡೆಸಿದ್ದರು. ಇದರಿಂದಾಗಿ ನ್ಯಾನೊ ಘಟಕ ಗುಜರಾತ್ ಗೆ ಸ್ಥಳಾಂತರಗೊಂಡಿತ್ತು.