ಮಹಿಳೆಯರ ವಿರುದ್ದ ಗೋವಾ ಸಚಿವರ ಹೇಳಿಕೆ : ವ್ಯಾಪಕ ಟೀಕೆ
ಟಿವಿ ಧಾರಾವಾಹಿಗಳನ್ನು ನೋಡುತ್ತಾ ಅವುಗಳಲ್ಲೇ ಮುಳುಗಿ ಹೋಗುವ ಮಹಿಳೆಯರು, ತನ್ನ ಪತಿ ಆಫೀಸಿನಿಂದ ಬಂದ ಕೂಡಲೇ ಯಾವಾಗ....
ಪಣಜಿ: ಟಿವಿ ಧಾರಾವಾಹಿಗಳನ್ನು ನೋಡುತ್ತಾ ಅವುಗಳಲ್ಲೇ ಮುಳುಗಿ ಹೋಗುವ ಮಹಿಳೆಯರು, ತನ್ನ ಪತಿ ಆಫೀಸಿನಿಂದ ಬಂದ ಕೂಡಲೇ ಯಾವಾಗ ಬಂದಿರಿ, ಕಾಫಿ ಅಥವಾ 'ಟೀ' ಬೇಕೆ ಎಂಬುದನ್ನು ಕೇಳಲು ಮರೆತುಹೋಗುತ್ತಾರೆ ಎಂದು ಗೋವಾ ಕಲೆ ಮತ್ತು ಸಂಸ್ಕೃತಿ ಸಚಿವ ದಯಾನಂದ ಮಂಡೇಕರ್ ನೀಡಿರುವ ಹೇಳಿಕೆ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.
ಭಾರತೀಯ ಜನತಾ ಪಕ್ಷದ ನಾಯಕ ಮಂಡೇಕರ್ ನೀಡಿರುವ ಹೇಳಿಕೆ, ಅವರ ಖಾಪ್ ಮೆಂಟಾಲಿಟಿ ತೋರುತ್ತದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಪಣಜಿಯಲ್ಲಿ ಕಲೆ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಾತಾನಾಡಿದ ಅವರು, ಮಹಿಳೆಯರಿಗೆ ಟಿವಿ ನೋಡುವುದರಲ್ಲಿ ತುಂಬಾ ಆಸಕ್ತಿ, ಸಂಜೆ ವೇಳೆ ಟಿವಿ ನೋಡಲು ಆರಂಭಿಸಿದರೇ ಅವರಿಗೆ ತಮ್ಮ ಪತಿ ಕಚೇರಿಯಿಂದ ಬಂದಿದ್ದಾರೋ ಇಲ್ಲವೋ ಎಂಬ ಪರಿಜ್ಞಾನವೂ ಇರುವುದಿಲ್ಲ. ಒಂದು ಕಪ್ ಕಾಫಿ ಅಥವಾ ಟೀ ಬೇಕೆ ಎಂದು ಕೇಳುವುದಿಲ್ಲ ಎಂದು ಟೀಕಿಸಿದ್ದಾರೆ.
ಧಾರಾವಾಹಿಗಳಿಗಿಂತ ಒಳ್ಳೆಯ ಕಾರ್ಯಕ್ರಮಗಳು ಟಿವಿಯಲ್ಲಿ ಪ್ರಸಾರವಾಗುತ್ತೆ. ಆದರೆ ಅಂತಹ ಕಾರ್ಯಕ್ರಮಗಳನ್ನು ಮಹಿಳೆಯರು ನೋಡುವುದಿಲ್ಲ ಎಂದು ಹೇಳಿದ್ದಾರೆ.