ತೀಸ್ತಾ ಸೆಟಲ್ವಾಡ್(ಸಂಗ್ರಹ ಚಿತ್ರ)
ನವದೆಹಲಿ: ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಮತ್ತು ಅವರ ಪತಿ ಜಾವೆದ್ ಆನಂದ್ 2002ರ ಗುಜರಾತ್ ದಂಗೆಯಲ್ಲಿ ಬಲಿಯಾದವರ ಕುಟುಂಬದವರ ಒಳಿತಿಗೆ ತಮ್ಮ ಸಂಘಟನೆಗಳಾದ ಸಬ್ರಂಗ್ ಟ್ರಸ್ಟ್ ಮತ್ತು ಸಿಟಿಜೆನ್ ಫಾರ್ ಜಸ್ಟಿಸ್ ಅಂಡ್ ಪೀಸ್ ಪಡೆದಿದ್ದ 9.75 ಕೋಟಿ ರೂಪಾಯಿಯಲ್ಲಿ 3.85 ಕೋಟಿ ರೂಪಾಯಿಗಳನ್ನು ಸ್ವಂತ ಬಳಕೆಗೆ ಉಪಯೋಗಿಸಿದ್ದರು ಎಂದು ಗುಜರಾತ್ ಪೊಲೀಸರು ಆರೋಪಿಸಿದ್ದಾರೆ.
ಈ ಸಂಬಂಧ ಸುಪ್ರೀಂ ಕೋರ್ಟ್ ಗೆ 83 ಪುಟಗಳ ಪ್ರಮಾಣಪತ್ರ ಸಲ್ಲಿಸಿರುವ ಗುಜರಾತ್ ಪೊಲೀಸರು ಈ ಸಂಬಂಧ ತಮ್ಮಲ್ಲಿ ಸಾಕ್ಷ್ಯಗಳಿವೆ ಎಂದು ಹೇಳಿದೆ.
ಇಂಗ್ಲಿಷ್ ದೈನಿಕ ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಸಹಾಯಕ ಪೊಲೀಸ್ ಆಯುಕ್ತ ರಾಹುಲ್ ಬಿ ಪಟೇಲ್ ಅಫಿಡವಿಟ್ಟಿನಲ್ಲಿ, ಸೆಟಲ್ವಾಡ್ ಮತ್ತು ಅವರ ಪತಿ ಆನಂದ್ ವಿಚಾರಣೆಗೆ ಅಸಹಕರಿಸುತ್ತಿದ್ದು, ಅವರಿಗೆ ಸಿಕ್ಕಿದ ಹಣದಲ್ಲಿ ಸಾಕಷ್ಟು ಹಣವನ್ನು ದಂಗೆಯಲ್ಲಿ ಬಲಿಯಾದವರ ಕುಟುಂಬಕ್ಕೆ ನೀಡಿಲ್ಲ. ದಂಪತಿಯ ಬ್ಯಾಂಕು ಖಾತೆಯನ್ನು ನೋಡಿದರೆ 2007ರಿಂದ 2014ರವರೆಗೆ ಅವರು ನಡೆಸುತ್ತಿರುವ ಎರಡು ಟ್ರಸ್ಟ್ ಗಳಿಗೆ ದೇಶ, ವಿದೇಶಗಳಿಂದ ಒಟ್ಟು 9.75 ಕೋಟಿ ರೂಪಾಯಿ ಹಣದ ನೆರವು ಬಂದಿದೆ. ಅದರಲ್ಲಿ 3.85 ಕೋಟಿ ಹಣವನ್ನು ದಂಪತಿ ತಮ್ಮ ಸ್ವಂತ ಉಪಯೋಗಕ್ಕೆ ಬಳಸಿಕೊಂಡಿದ್ದಾರೆ ಎಂದರು.
ತೀಸ್ತಾ ಮತ್ತವರ ಪತಿ ಜನವರಿ 1 2001ರಲ್ಲಿ ಯುನೈಟೆಡ್ ಬ್ಯಾಂಕಿನಲ್ಲಿ ಎರಡು ಖಾತೆಗಳನ್ನು ತೆರೆದಿದ್ದರು. 2002 ಡಿಸೆಂಬರ್ 31ರವರೆಗೆ ಯಾವುದೇ ಹಣ ಇಟ್ಟಿರಲಿಲ್ಲ. ಜನವರಿ 2003ರಿಂದ ಡಿಸೆಂಬರ್ 2013ರವರೆಗೆ ಆನಂದ್ 96.43 ಲಕ್ಷ ರೂಪಾಯಿ ಠೇವಣಿಯಿಟ್ಟರೆ ಸೆಟಲ್ವಾಡ್ 1.53 ಕೋಟಿ ರೂಪಾಯಿಯನ್ನಿಟ್ಟಿದ್ದರು ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿರುವುದಾಗಿ ಪತ್ರಿಕೆ ವರದಿ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics