ನಗರವಾಸಿಗಳ ಅನುಕೂಲಕ್ಕಾಗಿ ಜಯಲಲಿತಾ ಅವರು ಅನೇಕ ಯೋಜನೆಗಳನ್ನು ಜಾರಿಗೆ ತಂದರು ಆ ಮೂಲಕ ಜನಮಾನಸದಲ್ಲಿ ಜಯ ಅಚ್ಚಳಿಯದಂತೆ ನೆಲೆಸಿದ್ದಾರೆ.
ನಗರವಾಸಿಗಳ ಜೀವನ ನಿತ್ಯ ದುಬಾರಿಯಾಗುತ್ತಿದ್ದು ನಗರದ ಬಡ, ಮಧ್ಯಮ ವರ್ಗದವರಿಗೆ ರುಪಾಯಿಗೆ ಇಡ್ಲಿ, ಐದು ರೂಪಾಯಿಗೆ ಪೊಂಗಲ್, ಅನ್ನ ಸಂಬಾರ್, ಮೂರು ರೂಪಾಯಿಗೆ ಮೊಸರನ್ನ, ಎರಡು ಚಪಾತಿ ಮತ್ತು ದಾಲ್ ಹೀಗೆ ಕಡಿಮೆ ಮೊತ್ತದಲ್ಲಿ ಊಟ ಸಿಗುವಂತೆ ಮಾಡಲು ಅಮ್ಮಾ ಉಪಾಹಾರ ಗೃಹವನ್ನು 2013ರಲ್ಲಿ ತೆರೆದರು. ಇದು ಅವರ ಜನಪ್ರಿಯತೆಗೆ ಇನ್ನಷ್ಟು ಮೆರುಗನ್ನು ನೀಡಿತು.
ಕಳೆದ ಜೂನ್ ನಲ್ಲಿ ಜಯಲಲಿತಾ ಅವರು ತಮಿಳುನಾಡಿನಾದ್ಯಂತ ಒಟ್ಟು 100 ಅಮ್ಮ ಮೆಡಿಕಲ್ ಶಾಪ್ ಗಳಿಗೆ ಚಾಲನೆ ನೀಡಿದರು. ಈ ಶಾಪ್ ಗಳಲ್ಲಿ ಹೈಪರ್ ಟೆನ್ಶನ್, ಮಧುಮೇಹ, ವೈರಲ್ ಇನ್ಜೆಕ್ಷನ್ ಸಂಬಂಧಿತ ಔಷಧಿಗಳು ಎಂಆರ್ಪಿಗಿಂತ ಅಗ್ಗದ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಬಡ ಮತ್ತು ಮಧ್ಯಮ ವರ್ಗದವರು ಅದರಲ್ಲೂ ವಿಶೇಷವಾಗಿ ಪಿಂಚಣಿ ಪಡೆಯುತ್ತಿರುವ ಹಿರಿಯ ನಾಗರಿಕರನ್ನು ದೃಷ್ಠಿಯಲ್ಲಿಟ್ಟುಕೊಂಡು ಈ ಯೋಜನೆ ಜಾರಿಗೊಳಿಸಲಾಗಿತ್ತು.
2013ರ ಸೆಪ್ಟೆಂಬರ್ 15ರಂದು ಮಾಜಿ ಮುಖ್ಯಮಂತ್ರಿ ಸಿಎನ್ ಅಣ್ಣಾದೊರೈ ಅವರ 105ನೇ ಜನ್ಮದಿನಾಚರಣೆ ದಿನದಂದು ಅಮ್ಮ ಕುಡಿನೀರು ಯೋಜನೆಗೆ ಜಯಲಲಿತಾ ಚಾಲನೆ ನೀಡಿದರು. ಇದರೊಂದಿಗೆ ಖಾಸಗಿ ಕಂಪನಿಗಳ ದುಬಾರಿ ನೀರಿಗೆ ಸೆಡ್ಡು ಹೊಡೆದು ಕಡಿಮೆ ಬೆಲೆಗೆ ನೀರು ನೀಡಲು ಮುಂದಾದರು.
ಆಗಸ್ಟ್ 6ರಂದು ಕೃಷಿಕರಿಗೆ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದಲ್ಲಿ ಬೀಜ ಪೂರೈಸುವ ಹೊಸ ಯೋಜನೆ ಘೋಷಿಸಿದ್ದರು. ಇದಕ್ಕಗಿ 156.74 ಕೋಟಿ ರು. ಮೀಸಲಿಟ್ಟಿರುವುದಾಗಿ ಜಯಲಲಿತಾ ವಿಧಾನಸಭೆಗೆ ತಿಳಿಸಿದ್ದರು. ಇನ್ನು ಅಮ್ಮ ಮಹಿಳಾ ಕೃಷಿ ಕೌಶಲ್ಯ ಅಭಿವೃದ್ಧಿ ಯೋಜನೆ ಅಡಿ 770 ಮಹಿಳೆಯರಿಗೆ ತರಬೇತಿ ನೀಡುವುದಾಗಿ ಘೋಷಿಸಿದ್ದರು.
ನಿತ್ಯೋಪಯೋಗಿ ವಸ್ತುಗಳ ಬೆಲೆ ನಿಯಂತ್ರಿಸುವ ಸಲುವಾಗಿ ರಾಜ್ಯಾದ್ಯಂತ 300 ಅಮ್ಮ ಅಮುಧಾಮ್ ದಿನಸಿ ಅಂಗಡಿ ತೆರೆಯಲು ತಮಿಳುನಾಡು ಸರ್ಕರಾ ಈ ತಿಂಗಳ ಆರಂಭದಲ್ಲಿ ಆದೇಶ ಹೊರಡಿಸಿದೆ. ಇದಕ್ಕಾಗಿ 37.2 ಕೋಟಿ ರುಪಾಯಿಯನ್ನು ಮೀಸಲಿಟ್ಟಿದೆ.