ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಹಳೆಯ 500 ಮತ್ತು 1000 ರು.ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿ ಸರಿಯಾಗಿ ಒಂದು ತಿಂಗಳು ಕಳೆದಿದ್ದು, ಅಂದಿನಿಂದ ಇಂದಿನವರೆಗೂ ಕೇಂದ್ರ ಸರ್ಕಾರ ಕ್ಯಾಶ್ ಲೆಸ್ ವಹಿವಾಟನ್ನು ಉತ್ತೇಜಿಸಲು ಸಾಕಷ್ಟು ನೀತಿಗಳನ್ನು ಜಾರಿಗೆ ತಂದಿದೆ.
ನೋಟು ನಿಷೇಧ ಬಳಿಕ ದೇಶದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟನ್ನು ಸರಿಪಡಿಸಲು ಸಾಕಷ್ಟು ಹೊಸ ನೋಟುಗಳನ್ನು ಚಲಾವಣೆಗೆ ತರಲಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಎಲ್ಲ ಎಟಿಎಂಗಳು ಸಾಮಾನ್ಯ ಸ್ಥಿತಿಗೆ ಬರಲಿದೆ ಎಂದು ಕೇಂದ್ರ ಸರ್ಕಾರ ವಿಶ್ವಾಸ ವ್ಯಕ್ತಪಡಿಸಿತ್ತು. ಅಲ್ಲದೆ ದೇಶದ ಶೇ.95ರಷ್ಟು ಎಟಿಎಂಗಳು ಸಾಮಾನ್ಯದಂತೆ ಕಾರ್ಯ ನಿರ್ವಹಿಸುತ್ತಿವೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಕೇಂದ್ರ ಸರ್ಕಾರದ ಈ ಹೇಳಿಕೆಯಲ್ಲಿ ಸತ್ಯಾಂಶವಿದೆಯೇ? ದೇಶದ 95ರಷ್ಟು ಎಟಿಎಂಗಳು ಸಾಮಾನ್ಯದಂತೆ ಕಾರ್ಯ ನಿರ್ವಹಿಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರ ಇಲ್ಲ...
ಹೌದು... ಕೇಂದ್ರ ಸರ್ಕಾರ ಹೇಳಿಕೊಂಡಿರುವಂತೆ ದೇಶದ ಶೇ.95ರಷ್ಟು ಎಟಿಎಂಗಳು ಸಾಮಾನ್ಯದಂತೆ ಕಾರ್ಯನಿರ್ವಹಿಸುತ್ತಿದೆ ಎಂಬ ಮಾತು ಸತ್ಯಕ್ಕೆ ದೂರವಾಗಿದ್ದು, ನೋಟು ನಿಷೇಧವಾಗಿ ಒಂದು ತಿಂಗಳೇ ಕಳೆದರೂ ಎಟಿಎಂಗಳ ಕಾರ್ಯ ನಿರ್ವಹಣೆಯಲ್ಲಿ ಮಾತ್ರ ಯಾವುದೇ ಸುಧಾರಣೆ ಕಂಡುಬಂದಿಲ್ಲ. ಈ ಬಗ್ಗೆ "ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ" ದೇಶಾದ್ಯಂತ ರಿಯಾಲಿಟಿ ಚೆಕ್ ನಡೆಸಿದ್ದು, ದೇಶದ ಪ್ರಮುಖ 13 ನಗರಗಳಲ್ಲಿ ನಡೆಸಿದ ರಿಯಾಲಿಟಿ ಚೆಕ್ ನಲ್ಲಿ ಶೇ.69.7 ಎಟಿಎಂಗಳು ಕಾರ್ಯನಿರ್ವಹಿಸುತ್ತಿಲ್ಲ ಎಂಬ ಮಾಹಿತಿ ಬಹಿರಂಗವಾಗಿದೆ.
ಬೆಂಗಳೂರು, ಚೆನ್ನೈ, ದೆಹಲಿ, ಕೋಲ್ಕತಾ, ಹೈದರಾಬಾದ್ ಸೇರಿದಂತೆ ದೇಶದ ಪ್ರಮುಖ 13 ನಗರಗಳ ಒಟ್ಟು 647 ಎಟಿಎಂಗಳಿಗೆ ಭೇಟಿ ನೀಡಿದ್ದು, ಈ ಪೈಕಿ ಆರ್ಧಕ್ಕಿಂತಲೂ ಹೆಚ್ಚು ಅಂದರೆ ಶೇ.69.7ರಷ್ಟು ಎಟಿಎಂಗಳ ಕಾರ್ಯನಿರ್ವಹಣೆ ಸ್ಥಗಿತಗೊಂಡಿರುವ ವಿಚಾರ ಬೆಳಕಿಗೆ ಬಂದಿದೆ. ಇದು ಕೇಂದ್ರ ಸರ್ಕಾರದ ಅಸಮರ್ಪಕ ನಿರ್ವಹಣೆಗೆ ಹಿಡಿದ ಕನ್ನಡಿಯಾಗಿದ್ದು, ಇಂದಿಗೂ ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿನ ಜನ ನಗದಿಗಾಗಿ ಭವಣೆ ಪಡುತ್ತಿದ್ದಾರೆ.
ಇನ್ನು ದಕ್ಷಿಣ ಭಾರತದ ಪ್ರಮುಖ ನಗರಗಳಾದ ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್ ಗಳಲ್ಲಿನ ಎಟಿಎಂಗಳ ಕಾರ್ಯನಿರ್ವಹಣೆ ಚಿಂತಾಜನಕವಾಗಿದ್ದು, ಈ ಮೂರು ನಗರಗಳಲ್ಲಿನ ಕಾರ್ಯ ನಿರ್ವಹಣೆ ಶೇ.8ಕ್ಕಿಂತಲೂ ಕಡಿಮೆ ಇದೆ. ಈ ಪೈಕಿ ಹೈದರಾಬಾದ್ ನಗರ ಆಗ್ರ ಸ್ಥಾನದಲ್ಲಿದ್ದು, ಭೇಟಿ ನೀಡಿದ 50 ಎಟಿಎಂಗಳ ಪೈಕಿ ಇಲ್ಲಿ ಬರೊಬ್ಬರಿ 49 ಎಟಿಎಂಗಳು ಸ್ಥಗಿತಗೊಂಡಿರುವುದು ಕಂಡುಬಂದಿದೆ. ಆದರೆ ತಿರುವನಂತಪುರಂ ಹಾಗೂ ಭುವನೇಶ್ವರ ದಂತಹ ಸಣ್ಣ ನಗರಗಳಲ್ಲಿನ ಪರಿಸ್ಥಿತಿ ಇದಕ್ಕಿಂತ ಉತ್ತಮವಾಗಿದೆ ಎಂದು ಹೇಳಬಹುದು. ಭುವನೇಶ್ವರದಲ್ಲಿ ಶೇ.16ರಷ್ಟು ಮತ್ತು 26.8ರಷ್ಟು ಎಟಿಎಂಗಳು ಮಾತ್ರ ಸ್ಥಗಿತಗೊಂಡಿವೆ.
ಆದರೆ ಚಂಡೀಘಡ್ ನಲ್ಲಿ ಶೇ.87.5ರಷ್ಟು, ಕೊಯಮತ್ತೂರಿನಲ್ಲಿ 89.1ರಷ್ಟು, ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಶೇ.87.5 ಮತ್ತು ವಿಶಾಖಪಟ್ಟಣಂ ನಲ್ಲಿ ಶೇ.85.3ರಷ್ಟು ಎಟಿಎಗಳು ಸ್ಥಗಿತಗೊಂಡಿವೆ. ಇನ್ನು ಕರ್ನಾಟಕದ ಬೆಂಗಳೂರಿನಲ್ಲಿ 88.5ರಷ್ಟು ಮತ್ತು ಮೈಸೂರಿನಲ್ಲಿ ಶೇ.56ರಷ್ಟು ಎಟಿಎಂಗಳ ಕಾರ್ಯ ನಿರ್ವಹಣೆ ಸ್ಥಗಿತಗೊಂಡಿವೆ. ಮಹಾರಾಷ್ಟ್ರದ ನಾಗಪುರಂನಲ್ಲಿ ಶೇ.90 ರಷ್ಟು ಎಟಿಎಂಗಳ ಕಾರ್ಯ ನಿರ್ವಹಣೆ ಸ್ಥಗಿತವಾಗಿವೆ.
ಆತ್ತ ದೇಶಾದ್ಯಂತ ನಗದಿಗಾಗಿ ಜನ ಭವಣೆ ಪಡುತ್ತಿರುವಂತೆಯೇ ನಿನ್ನೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ನಗದುರಹಿತ ವಹಿವಾಟನ್ನು ಉತ್ತೇಜಿಸಲು 11 ಅಂಶಗಳ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಕೇಂದ್ರ ಸರ್ಕಾರವೇನೋ ಕ್ಯಾಶ್ ಲೆಸ್ ಕ್ರಮದಿಂದ ಸಾಕಷ್ಟು ಲಾಭವಿದೆ ಎಂದು ಹೇಳುತ್ತಿದೆ. ಅದು ನಿಜವೇ ಆದರೂ ಪ್ರಸ್ತುತ ಎದುರಾಗಿರುವ ಚಿಲ್ಲರೆ ಭವಣೆಯಿಂದಾಗಿ ಬಹುತೇಕ ಮಧ್ಯಮ ಗಾತ್ರದ ವ್ಯಾಪರ-ವಹಿವಾಟಿಗೆ ಭಾರಿ ಪ್ರಮಾಣದ ಧಕ್ಕೆಯಾಗಿದೆ. ಇದರಿಂದ ತನಗೇ ನಷ್ಟವೆಂಬ ಅಂಶವನ್ನೂ ಕೂಡ ಕೇಂದ್ರ ಸರ್ಕಾರ ಮರೆಯಬಾರದು.