ನವದೆಹಲಿ: ಭಾರತದೊಂದಿಗೆ ಹಗೆತನ ಸಾಧಿಸಲು ಪಾಕಿಸ್ತಾನ ಬಯಸುವುದಿಲ್ಲ ಎಂದು ಹೇಳಿರುವ ಪಾಕಿಸ್ತಾನದ ಹೈಕಮಿಷನರ್ ಅಬ್ದುಲ್ ಬಸಿತ್, ದ್ವಿಪಕ್ಷೀಯ ಸಂಬಂಧದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಉಭಯ ರಾಷ್ಟ್ರಗಳೂ ಮುಂದಾಗಬೇಕು ಎಂದು ಕರೆ ನೀಡಿದ್ದಾರೆ.
ಭಾರತ-ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಬ್ದುಲ್ ಬಸಿತ್, ಉಭಯ ರಾಷ್ಟ್ರಗಳ ನಡುವೆ ಗಂಭೀರ ಸಮಸ್ಯೆಗಳಿವೆ, ಅದನ್ನು ಅಲ್ಲಗಳೆಯಲು ಅಥವಾ ದೂರವಿಡಲು ಸಾಧ್ಯವಿಲ್ಲ. ಆದರೆ ದ್ವಿಪಕ್ಷೀಯ ಸಂಬಂಧದ ಹೊಸ ಅಧ್ಯಾಯಕ್ಕೆ ಉಭಯ ರಾಷ್ಟ್ರಗಳೂ ಮುಂದಾಗಬೇಕಿದೆ. ಪಾಕಿಸ್ತಾನ ಭಾರತದೊಂದಿಗೆ ಹಗೆತನವನ್ನು ಬಯಸುವುದಿಲ್ಲ ಎಂದು ತಿಳಿಸಿದ್ದಾರೆ.
ಪಾಕಿಸ್ತಾನ ಸಕಾರಾತ್ಮಕ ಮಾತುಕತೆ ನಡೆಸುವ ಉದ್ದೇಶ ಹೊಂದಿದೆ. ಹಾಗೆಯೇ ಭಾರತ ಸಹ ಇದಕ್ಕೆ ಪೂರಕವಾಗಿ ನಡೆದುಕೊಳ್ಳಬೇಕು ಹಾಗಾದಲ್ಲಿ ಮಾತ್ರವೇ ದ್ವಿಪಕ್ಷೀಯ ಸಂಬಂಧದಲ್ಲಿ ಹೊಸ ಅಧ್ಯಾಯವೊಂದು ಪ್ರಾರಂಭವಾಗಲು ಸಾಧ್ಯ ಎಂದು ಅಬ್ದುಲ್ ಬಸಿತ್ ಅಭಿಪ್ರಾಯಪಟ್ಟಿದ್ದಾರೆ.
ಸೆಪ್ಟೆಂಬರ್ ತಿಂಗಳಲ್ಲಿ ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ಪಾಕಿಸ್ತಾನದ ಭಯೋತ್ಪಾದಕರು 19 ಭಾರತೀಯ ಯೋಧರನ್ನು ಹತ್ಯೆ ಮಾಡಿದ ಬಳಿಕ ಭಾರತ- ಪಾಕ್ ದ್ವಿಪಕ್ಷೀಯ ಸಂಬಂಧ ತೀವ್ರವಾಗಿ ಹದಗೆಟ್ಟಿದೆ.