ದೇಶ

ಭದ್ರತೆ ವಿಡಿಯೋ ಪ್ರಕರಣ: ನಾನು ಯಾವುದೇ ತಪ್ಪು ಮಾಡಿಲ್ಲ - ಭಗವಂತ್ ಮನ್

Manjula VN

ನವದೆಹಲಿ: ನಾನು ಯಾವುದೇ ತಪ್ಪನ್ನು ಮಾಡಿಲ್ಲ, ಸಂಸತ್ತು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಜನರಿಗೆ ತೋರಿಸುವುದಷ್ಟೇ ನನ್ನ ಉದ್ದೇಶವಾಗಿದ್ದ ಎಂದು ಆಮ್ ಆದ್ಮಿ ಪಕ್ಷದ ಸಂಸದ ಭಗವಂತ್ ಮನ್ ಅವರು ಶುಕ್ರವಾರ ಹೇಳಿದ್ದಾರೆ.

ಸಂಸತ್ತಿನ ಭದ್ರತಾ ವ್ಯವಸ್ಥೆಯನ್ನು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ಸಂಸದ ಭಗವಂತ್ ಮನ್ ಅವರನ್ನು ಲೋಕಸಭೆಯಿಂದ ಅಮಾನತು ಮಾಡಲಾಗಿತ್ತು.

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಅಮಾನತಿನ ಹಿಂದೆ ರಾಜಕೀಯ ಪಿತೂರಿ ಅಡಲಿದೆ. ಪಂಜಾಬ್ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ನನ್ನ ಮೇಲೆ ದಾಳಿ ಮಾಡಲಾಗುತ್ತಿದೆ. ನಾನು ತಪ್ಪು ಮಾಡಿದ್ದೇನೆಂದು ನನಗನ್ನಿಸುತ್ತಿಲ್ಲ. ಸಂಸತ್ತು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಜನರಿಗೆ ತೋರಿಸುವುದಷ್ಟೇ ನನ್ನ ಉದ್ದೇಶವಾಗಿದ್ದು ಎಂದು ಹೇಳಿದ್ದಾರೆ.

ನಾನು ತಪ್ಪು ಮಾಡಿದ್ದೇನೆಂದು ಕೆಲವರಿಗೆ ಅನಿಸಿದ್ದೇ ಆದರೆ, ಸ್ಪೀಕರ್ ಗಳ ಎದುರಿನಲ್ಲಿಯೇ ಈಗಾಗಲೇ ನಾನು ಬೇಷರತ್ ಕ್ಷಮೆಯಾಚಿಸಿದ್ದೇನೆ. ಇದೀಗ ಲೋಕಸಭೆಯಿಂದ ನನ್ನನ್ನು ಅಮಾನತು ಮಾಡಲಾಗಿದೆ. ಈ ಬೆಳವಣಿಗೆಯನ್ನು ನೋಡಿದರೆ, ಇದೊಂದು ರಾಜಕೀಯ ಪಿತೂರಿ ಎನಿಸತೊಡಗಿದೆ. ಸಂಸತ್ತಿನಲ್ಲಿ ದಲಿತರು, ರೈತರಿಗೆ ಸಂಬಂಧಿಸಿದ ವಿಚಾರಗಳನ್ನು ಮಾತನಾಡಲು ನಿರ್ಧರಿಸಿದ್ದೆ, ನೋಟು ನಿಷೇಧ ಕುರಿತಂತೆ ಮಾತನಾಡಲು ನಿರ್ಧರಿಸಿದ್ದೆ 15 ಲಕ್ಷ ಜನರನ್ನು ನಾನು ಪ್ರತಿನಿಧಿಸುತ್ತಿದ್ದೇನೆ. ನನ್ನನ್ನೇಕೆ ಗುರಿ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಆಪ್ ಸಂಸದ ಭಗವಂತ್ ಮನ್ ಅವರು ಸಂಸತ್ತಿನ ಭದ್ರತಾತ ವ್ಯವಸ್ಥೆಯನ್ನು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು. ಈ ಪ್ರಕರಣ ಸಂಸತ್ತಿನಲ್ಲಿ ಸಾಕಷ್ಟು ಕೋಲಾಹಲವನ್ನು ಎಬ್ಬಿಸಿತ್ತು. ಸಾಕಷ್ಟು ವಿರೋಧ ವ್ಯಕ್ತವಾದ ಬಳಿಕ ಭಗವಂತ್ ಮನ್ ಅವರು, ಸಂಸತ್ತಿನಲ್ಲಿ ಬೇಷರತ್ ಕ್ಷಮೆಯಾಚಿಸಿದ್ದರು. ಆದರೆ ಈ ಕ್ಷಮೆಯನ್ನು ಒಪ್ಪದ ಸರ್ವ ಸದಸ್ಯರು ಮನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು.

ಸಂಸತ್ ಭದ್ರತಾ ನಿಯಮಗಳನ್ನು ಉಲ್ಲಂಘಿಸಿ ನಡೆಸಿರುವ ಚಿತ್ರೀಕರಣದ ಕುರಿತಂತೆ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು, ಕಿರೀಟ್ ಸೋಮಯ್ಯ ನೇತೃತ್ವದ ಸಮಿತಿ ರಚಿಸಿ ತನಿಖೆ ನಡೆಸಲು ಸೂಚಿಸಿದ್ದರು.

ಇದರಂತೆ ತನಿಖೆ ನಡೆಸಿದ್ದ ಕಿರೀಟ್ ಸೋಮಯ್ಯ ನೇತೃತ್ವದ ಸಮಿತಿ, ಭಗವಂತ್ ಮನ್ ಅವರನ್ನು ಅಮಾನತಿನಲ್ಲಿಡುವಂತೆ ಶಿಫಾರಸ್ಸು ಮಾಡಿತ್ತು. ಸಮಿತಿಯ ಶಿಫಾರಸ್ಸಿನಂತೆ ಇಂದು ನಡೆದ ಸಂಸತ್ ಕಲಾಪದಲ್ಲಿ ನಿರ್ಣಯ ಕೈಗೊಂಡು, ಲೋಕಸಭೆಯಿಂದ ಭಗವಂತ್ ಮನ್ ಅವರನ್ನು ಅಮಾನತು ಮಾಡಲಾಗಿತ್ತು.

SCROLL FOR NEXT