ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಜನರು ಮತ್ತೆ ಪಾಕಿಸ್ತಾನ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದು, ಸ್ವಾತಂತ್ರ್ಯಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪ್ರತಿಭಟನಾಕಾರರ ಮೇಲೆ ಪಾಕಿಸ್ತಾನ ಸೈನಿಕರು ಮೃಗದಂತೆ ವರ್ತಿಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ಅವರ ವಿರುದ್ಧ ಪಿಒಕೆ ಜನರು ಇಂದು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಪ್ರತಿಭಟನೆಯನ್ನು ಹತ್ತಿಕ್ಕುವಂತೆ ಅಲ್ಲಿನ ಸರ್ಕಾರ ತನ್ನ ಸೈನಿಕರೆದೆ ಆದೇಶ ನೀಡಿದೆ. ಸರ್ಕಾರದ ಆದೇಶವನ್ನು ಪಾಲಿಸಲು ಮುಂದಾದ ಪಾಕಿಸ್ತಾನ ಪ್ರತಿಭಟನಾಕಾರರೊಂದಿಗೆ ಮೃಗಗಳಂತೆ ವರ್ತಿಸಿದ್ದಾರೆಂದು ವರದಿಗಳು ತಿಳಿಸಿವೆ.
ಕಳೆದ ಜುಲೈ ತಿಂಗಳ ನಂತರ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಜನರು ಅಲ್ಲಿನ ಆಡಳಿತದ ವಿರುದ್ಧ ಸಿಡಿದೆದ್ದಿದ್ದು, ಸ್ವಾತಂತ್ರ್ಯ ಆಗ್ರಹಿಸಿ ತೀವ್ರ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಸಾವಿರಾರು ಜನರು ಬೀದಿಗಿಳಿದು ಪಾಕಿಸ್ತಾನ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪಿಒಕೆಯಂತೆಯೇ ಬಲೂಚಿಸ್ತಾನದಲ್ಲಿರುವ ಜನರು ಕೂಡ ಪಾಕಿಸ್ತಾನದಿಂದ ಸ್ವಾತಂತ್ರ್ಯವನ್ನು ಆಗ್ರಹಿಸಿ ಹಲವಾರು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಬಲೂಚಿಸ್ತಾನ ವಿಚಾರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರಸ್ತಾಪ ಮಾಡಿದ ನಂತರ ಪಾಕ್ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ಅಲ್ಲಿನ ಜನತೆ ತಮ್ಮ ಪ್ರತಿಭಟನೆಗಳನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಇದೀಗ ಬಲೂಚಿಸ್ತಾನ ವಿಚಾರ ವಿಶ್ವಸಂಸ್ಥೆಯ ಗಮನಕ್ಕೆ ಬಂದಿದ್ದು, ವಿಶ್ವ ನಾಯಕರೂ ಕೂಡ ಸಾಕಷ್ಟು ಟೀಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.