ನವದೆಹಲಿ: ವಿವಿಧ ಸುರಕ್ಷತಾ ಕ್ರಮ ಕೈಗೊಳ್ಳಲು ಸಂಪನ್ಮೂಲ ಕ್ರೋಢೀಕರಿಸುತ್ತಿರುವ ರೈಲ್ವೆ ಇಲಾಖೆ ನಿಗದಿತ ಕೋಚ್ ಗಳ ಪ್ರಯಾಣ ದರದಲ್ಲಿ ಏರಿಕೆ ಮಾಡುವ ಸಾಧ್ಯತೆಗಳು ದಟ್ಟವಾಗಿವೆ.
ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು 1.20 ಲಕ್ಷ ಕೋಟಿ ಅನುದಾನ ನೀಡುವಂತೆ ಕೇಂದ್ರ ಹಣಕಾಸು ಸಚಿವಾಲಯಕ್ಕೆ ರೈಲ್ವೆ ಸಚಿವ ಸುರೇಶ್ ಪ್ರಭು ಪ್ರಸ್ತಾವನೆ ಸಲ್ಲಿಸಿದ್ದು ಇದಕ್ಕೆ ಹಣಕಾಸು ಸಚಿವ ಅರುಣ್ ಜೇಟ್ಲಿ ತಿರಸ್ಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರೈಲ್ವೆ ಟಿಕೆಟ್ ದರ ಹೆಚ್ಚಿಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸುರಕ್ಷತಾ ದೃಷ್ಟಿಯಿಂದ ರೈಲ್ವೆ ಟ್ರ್ಯಾಕ್ ಗಳ ಸಾಮರ್ಥ್ಯ ಹೆಚ್ಚಳ, ಸಿಗ್ನಲ್ ವ್ಯವಸ್ಥೆ ಉನ್ನತೀಕರಣ, ಕಾವಲು ರಹಿತ ಕ್ರಾಸಿಂಗ್ ಬದಲು ಆಧುನಿಕ ವ್ಯವಸ್ಥೆ, ಹೀಗೆ ಹಲವು ಭದ್ರತಾ ಕ್ರಮಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಕೆಲ ತಿಂಗಳ ಹಿಂದೆ ಹಲವು ಯೋಜನೆಗಳನ್ನು ಘೋಷಿಸಿತ್ತು. ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ರಾಷ್ಟ್ರೀಯ ರೈಲ್ವೆ ಸಂರಕ್ಷಾ ಕೋಶ ರಚಿಸಿತ್ತು. ಇದಕ್ಕಾಗಿ 1.20 ಲಕ್ಷ ಕೋಟಿ ರುಪಾಯಿ ಅನುದಾನಕ್ಕೆ ಪ್ರಸ್ತಾವನೆ ನೀಡಿತ್ತು.
ಒಟ್ಟು ಯೋಜನಾ ಮೊತ್ತದ ಶೇಕಡ 25 ಅನುದಾನ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ. ಹೀಗಾಗಿ ರೈಲ್ವೆ ಇಲಾಖೆಯೇ ಯೋಜನೆಗಳಿಗೆ ಶೇಕಡ 75ರಷ್ಟು ಹಣಕಾಸು ಸಂಗ್ರಹಿಸುವ ಅನಿವಾರ್ಯತೆಗೆ ರೈಲ್ವೆ ಇಲಾಖೆ ಸಿಲುಕಿದೆ.