ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್
ಲಕ್ನೋ: ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಅಖಿಲೇಶ್ ಯಾದವ್ ಸರ್ಕಾರ ಅಲ್ಲಿನ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯದ ಸುಮಾರು 25 ಲಕ್ಷ ಸರ್ಕಾರಿ ಉದ್ಯೋಗಿಗಳಿಗೆ, ಶಿಕ್ಷಕರಿಗೆ ಮತ್ತು ಪಿಂಚಣಿದಾರರಿಗೆ ಅನುಕೂಲವಾಗಲು 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗೆ ತರಲು ಅನುಮೋದನೆ ನೀಡಿದ್ದಾರೆ.
ನಿನ್ನೆ ಸಚಿವ ಸಂಪುಟ ಸಭೆ ನಡೆಸಿದ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಸಚಿವರ ಒಮ್ಮತದೊಂದಿಗೆ ರಾಜ್ಯದ ವಿವಿಧ ವರ್ಗಗಳ ಜನರಿಗೆ ಅನುಕೂಲವಾಗುವ 80 ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದ್ದಾರೆ.
ಸರ್ಕಾರಿ ಹೇಳಿಕೆ ಪ್ರಕಾರ, 7ನೇ ವೇತನ ಆಯೋಗದ ಶಿಫಾರಸುಗಳು ಮುಂದಿನ ವರ್ಷ ಜನವರಿ 17ರಿಂದ ಜಾರಿಗೆ ಬರಲಿದೆ. ಇದರಿಂದ ಸರ್ಕಾರಿ ಉದ್ಯೋಗಿಗಳ ವೇತನದಲ್ಲಿ ಶೇಕಡಾ 15ರಿಂದ 20 ಶೇಕಡಾ ಏರಿಕೆಯಾಗಲಿದೆ. ಶಿಫಾರಸ್ಸಿನ ಪ್ರಕಾರ, 6ನೇ ವರ್ಗದ ಸರ್ಕಾರಿ ಉದ್ಯೋಗಿಗಳಿಗೆ ಆರಂಭಿಕ ವೇತನ ತಿಂಗಳಿಗೆ 18,000ದಷ್ಟಿರಲಿದ್ದು, ಸರ್ಕಾರದ ಮುಖ್ಯ ಕಾರ್ಯದರ್ಶಿ ವೇತನ ಗರಿಷ್ಟ 2.25 ಲಕ್ಷದವರೆಗೆ ಇರುತ್ತದೆ. ಕಂತುಗಳಲ್ಲಿ ಭತ್ಯೆಗಳನ್ನು ಹಂತ ಹಂತವಾಗಿ ವಿತರಣೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.