ದೇಶ

ಈಗ ದೆಹಲಿ ಸರದಿ; ಕೃಷ್ಣಾನಗರ ಎಕ್ಸಿಸ್ ಬ್ಯಾಂಕ್ ಮೇಲೆ ಐಟಿ ದಾಳಿ, 12 ನಕಲಿ ಖಾತೆ ಪತ್ತೆ!

Srinivasamurthy VN

ನವದೆಹಲಿ: ನೋಟು ನಿಷೇಧ ಬಳಿಕ ಕಾಳಧನಿಕರ ಮೇಲೆ ಕಣ್ಣಿಟ್ಟಿರುವ ಆದಾಯ ತೆರಿಗೆ ಅಧಿಕಾರಿಗಳು ನಿರಂತರ ದಾಳಿಯಲ್ಲಿ ತಲ್ಲೀನರಾಗಿದ್ದು, ಶುಕ್ರವಾರ ಮತ್ತೆ ದೆಹಲಿಯ ಕೃಷ್ಣಾನಗರದಲ್ಲಿರುವ ಎಕ್ಸಿಸ್ ಬ್ಯಾಂಕ್ ಮೇಲೆ ದಾಳಿ 12  ನಕಲಿ ಖಾತೆಗಳನ್ನು ಪತ್ತೆ ಮಾಡಿದ್ದಾರೆ.

ನಿನ್ನೆಯಷ್ಟೇ ಇದೇ ಎಕ್ಸಿಸ್ ಬ್ಯಾಂಕ್ ಉತ್ತರ ಪ್ರದೇಶದ ನೋಯ್ಡಾ ಶಾಖೆ ಮೇಲೆ ದಾಳಿ ಮಾಡಿದ್ದ ಅಧಿಕಾರಿಗಳು ಅಲ್ಲಿ ಸುಮಾರು 20 ನಕಲಿ ಖಾತೆಗಳನ್ನು ಪತ್ತೆ ಮಾಡಿ ಅದರಲ್ಲಿದ್ದ ಸುಮಾರು 60 ಕೋಟಿ ಹಣವನ್ನು ವಶಕ್ಕೆ  ಪಡೆದಿದ್ದರು. ಇದರ ಬೆನ್ನಲ್ಲೇ ಎಕ್ಸಿಸ್ ಬ್ಯಾಂಕ್ ಮತ್ತೊಂದು ಶಾಖೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದೆಹಲಿಯ ಕೃಷ್ಣಾನಗರದಲ್ಲಿರುವ ಎಕ್ಸಿಸ್ ಬ್ಯಾಂಕ್ ಮೇಲೆ ಇಂದು ದಾಳಿ ನಡೆಸಿರುವ ಆದಾಯ ತೆರಿಗೆ  ಅಧಿಕಾರಿಗಳು ಅಲ್ಲಿದ್ದ ಸುಮಾರು 12 ನಕಲಿ ಖಾತೆಗಳನ್ನು ಪತ್ತೆ ಮಾಡಿದ್ದಾರೆ.

ಆದಾಯ ತೆರಿಗೆ ಅಧಿಕಾರಿಗಳು ಶಂಕಿಸಿರುವಂತೆ ಕಾಳಧನಿಕರು ತಮ್ಮಲ್ಲಿರುವ ಕಪ್ಪುಹಣವನ್ನು ಬಿಳಿಯಾಗಿಸಿಕೊಳ್ಳಲು ಒಂದೇ ಬ್ಯಾಂಕಿನ ವಿವಿಧ ಶಾಖೆಗಳಲ್ಲಿ ಖಾತೆತೆರೆದಿರುವ ಸಾಧ್ಯತೆಗಳಿದ್ದು, ಇದೇ ಕಾರಣಕ್ಕೆ ದಾಳಿ  ನಡೆಸಲಾಗುತ್ತಿದೆ. ಪ್ರಸ್ತುತ ದಾಳಿ ನಿನ್ನೆ ನೋಯ್ಡಾದಲ್ಲಿ ನಡೆದ ದಾಳಿಯ ಮುಂದುವರೆದ ಭಾಗವಾಗಿದ್ದು, ನಕಲಿ ಖಾತೆಗಳನ್ನು ಕೂಲಂಕುಷವಾಗಿ ಪರಿಶೀಲಿಸಲಾಗುತ್ತಿದೆ. ಎಲ್ಲ ಖಾತೆಗಳ ಪೂರ್ವಾಪರ ಪರಿಶೀಲನೆ  ಮಾಡಲಾಗುತ್ತಿದ್ದು, ಅಕ್ರಮ ಸಾಬೀತಾದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಇದೇ ವೇಳೆ ಪ್ರಸ್ತುತ ದಾಳಿ ನಡೆಸುತ್ತಿರುವ ಆದಾಯ ತೆರಿಗೆ ಅಧಿಕಾರಿಗಳು ಹಾಗೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದು, ಪರಸ್ಪರ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ನಿನ್ನೆ ನೋಯ್ಡಾದಲ್ಲಿ ನಡೆದ ದಾಳಿಯಲ್ಲಿ 20 ನಕಲಿ ಖಾತೆಗಳು ಮತ್ತು ಈ ಖಾತೆಗಳಲ್ಲಿ ಒಟ್ಟು 60 ಕೋಟಿ ಹಣ ಪತ್ತೆಯಾಗಿತ್ತು. ಅಂತೆಯೇ ಡಿಸೆಂಬರ್ 9ರಂದು ದೆಹಲಿ ಚಾಂದಿನಿ ಚೌಕ್ ನಲ್ಲಿ ನಡೆದ ದಾಳಿ ವೇಳೆ 15 ನಕಲಿ  ಖಾತೆಗಳಲ್ಲಿ ಒಟ್ಟು 450 ಕೋಟಿ ಹಣ ಪತ್ತೆಯಾಗಿತ್ತು.

SCROLL FOR NEXT