ರಾಷ್ಟ್ರೀಯ ತನಿಖಾ ಸಂಸ್ಥೆಯ ಮಹಾ ನಿರ್ದೇಶಕ ಅಲೋಕ್ ಮಿತ್ತಲ್
ನವದೆಹಲಿ: ಜೈಶ್ ಇ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಮತ್ತು ಅದರ ಇತರ ಕಮಾಂಡರ್ ಗಳ ವಿರುದ್ಧ ಡಿಜಿಟಲ್ ತಾಂತ್ರಿಕ, ಮೌಖಿಕ ಮತ್ತು ಸಾಕ್ಷ್ಯಚಿತ್ರ ಸಾಕ್ಷ್ಯಾಧಾರಗಳನ್ನು ಆಧರಿಸಿ ವಿವರವಾಗಿ ವೈಜ್ಞಾನಿಕ ತನಿಖೆ ನಡೆಸಿ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ)ಯ ಪ್ರಧಾನ ನಿರ್ದೇಶಕ ಅಲೋಕ್ ಮಿತ್ತಲ್ ತಿಳಿಸಿದ್ದಾರೆ.
ವಿವರವಾದ ವೈಜ್ಞಾನಿಕ ತನಿಖೆ ನಂತರ ಇಂದು ನಾವು ಜೈಶ್ ಇ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ಮತ್ತು ಆತನ ಸಹಚರರ ವಿರುದ್ಧ ಮೊಹಾಲಿಯ ವಿಶೇಷ ತನಿಖಾ ಸಂಸ್ಥೆಯಲ್ಲಿ ಆರೋಪ ಪಟ್ಟಿ ಸಲ್ಲಿಸಿದ್ದೇವೆ. ಅಲ್ಲಗಳೆಯಲಾಗದ, ಡಿಜಿಟಲೀಕರಣವಾದ, ತಾಂತ್ರಿಕ, ಮೌಖಿತ ಮತ್ತು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ ಆರೋಪ ಪಟ್ಟಿ ಇದಾಗಿದೆ ಎಂದು ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಆರೋಪ ಪಟ್ಟಿಯಲ್ಲಿ ಹೆಸರಿಸಿರುವ ಎಲ್ಲಾ ಆರೋಪಿಗಳು ಪಾಕಿಸ್ತಾನದವರಾಗಿದ್ದು, ಈ ಸಂಬಂಧ ಪಾಕಿಸ್ತಾನದ ಅಧಿಕಾರಿಗಳಿಗೆ ಪೂರಕ ಪ್ರತಿಯೊಂದನ್ನು ಇಟ್ಟು ಪತ್ರ ಬರೆಯಲಾಗಿದೆ. ಆದರೆ ಅದಕ್ಕೆ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅಲೋಕ್ ತಿಳಿಸಿದ್ದಾರೆ.
ಈ ವರ್ಷ ಜನವರಿ 2ರಂದು ಪಠಾಣ್ ಕೋಟ್ ವಾಯುನೆಲೆ ಮೇಲೆ ನಡೆದ ದಾಳಿಯಲ್ಲಿ ಜೈಶ್ ಇ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಮತ್ತು ಇತರ ಕಮಾಂಡರ್ ಗಳ ಪಾತ್ರವಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಇಂದು ವಿಶೇಷ ಕೋರ್ಟ್ ಗೆ ಸಲ್ಲಿಸಿದ್ದ ಆರೋಪ ಪಟ್ಟಿಯಲ್ಲಿ ನಮೂದಿಸಲಾಗಿದೆ.
ಗೃಹ ವ್ಯವಹಾರಗಳ ಸಚಿವಾಲಯದಿಂದ ಕಾನೂನು ವಿರುದ್ಧ ಚಟುವಟಿಕೆಗಳ (ತಡೆ) ಕಾಯ್ದೆ 1967ರ ಸೆಕ್ಷನ್ 45(1)ರಡಿ ಕ್ರಮ ಕೈಗೊಳ್ಳಲು ಅನುಮತಿ ಕೂಡ ಪಡೆಯಲಾಗಿದೆ.