ನವದೆಹಲಿ: ಕೇಂದ್ರ ಸಾಮಾನ್ಯ ಮತ್ತು ರೈಲ್ವೆ ಬಜೆಟ್ ಮಂಡನೆಗೆ ಮುನ್ನ ಪ್ರಯಾಣಿಕರಿಗೆ ಮೂಲ ಸೇವೆಗಳಿಗೆ ದರ ವಿಧಿಸುವ ಸೂಚನೆ ನೀಡಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ರೈಲ್ವೆ ಪ್ರಯಾಣಿಕರು ತಾವು ಪಡೆಯುವ ಸೇವೆಗಳಿಗೆ ಹಣ ನೀಡಬೇಕಾಗುತ್ತದೆ ಎಂದರು.
ವರ್ಷದಿಂದ ವರ್ಷಕ್ಕೆ ರೈಲ್ವೆ ಬಜೆಟ್ ನ ಯಶಸ್ಸನ್ನು ಗ್ರಾಹಕರಿಗೆ ನೀಡುವ ಸಬ್ಸಿಡಿ ಮತ್ತು ಅನೇಕ ಜನಪ್ರಿಯ ಘೋಷಣೆಗಳನ್ನು ಮಾಡುವಲ್ಲಿ ಅಳೆಯಲಾಗುತ್ತದೆ ಎಂದು ಹೇಳಿದರು.
ಭಾರತೀಯ ಕೈಗಾರಿಕಾ ಒಕ್ಕೂಟ ಆಯೋಜಿಸಿದ್ದ ರೈಲ್ವೆಯ ಲೆಕ್ಕಪರಿಶೋಧಕ ಸುಧಾರಣೆಗಳ ಕುರಿತ ಸಮ್ಮೇಳನದಲ್ಲಿ ಮಾತನಾಡಿದ ಅವರು, ರೈಲ್ವೆ ಇಲಾಖೆಯ ಕಾರ್ಯನಿರ್ವಹಣೆ ಮತ್ತು ಆಂತರಿಕ ನಿರ್ವಹಣೆ ವ್ಯವಸ್ಥೆ ಸುಧಾರಣೆಯಾಗದಿದ್ದರೆ ಭೂ ಸಾರಿಗೆ ಮತ್ತು ವಿಮಾನಯಾನ, ಕಾರ್ಗೊ ಸಂಚಾರಗಳಿಂದ ತೀವ್ರ ಸ್ಪರ್ಧೆ ಎದುರಿಸಿ ನಷ್ಟ ಅನುಭವಿಸಬೇಕಾಗುತ್ತದೆ ಎಂದರು.
ಇಂಧನ ಮತ್ತು ಹೆದ್ದಾರಿ ವಲಯಗಳು ಗ್ರಾಹಕರಿಂದ ಸೇವಾ ಶುಲ್ಕ ಪಡೆಯಲು ಆರಂಭಿಸಿದಾಗ ಆ ವಲಯಗಳು ಲಾಭದತ್ತ ಸಾಗಿದವು. ರೈಲ್ವೆ ವಲಯಗಳಲ್ಲಿ ಸಹ ಗ್ರಾಹಕರಿಗೆ ನೀಡುವ ಸೇವೆಗಳಿಗೆ ಶುಲ್ಕ ವಿಧಿಸಿದಾಗ ಸುಧಾರಣೆಯಾಗಬಹುದು ಎಂದರು.
ಈ ಬಾರಿ ಕೇಂದ್ರದ ಸಾಮಾನ್ಯ ಬಜೆಟ್ ಜೊತೆಗೆ ರೈಲ್ವೆ ಬಜೆಟ್ ಕೂಡ ಮಂಡನೆಯಾಗಲಿದೆ. ಕಳೆದ ಸೆಪ್ಟೆಂಬರ್ ನಲ್ಲಿ 92 ವರ್ಷಗಳ ರೈಲ್ವೆ ಬಜೆಟ್ ಮಂಡನೆಗೆ ಕೊನೆ ಹಾಡಿರುವ ಕೇಂದ್ರ ಸರ್ಕಾರ ಮುಂದಿನ ವರ್ಷ ಫೆಬ್ರವರಿ 1ರಂದು ಸಾಮಾನ್ಯ ಬಜೆಟ್ ಮತ್ತು ರೈಲ್ವೆ ಬಜೆಟ್ ನ್ನು ಒಟ್ಟಿಗೆ ಮಂಡಿಸಲಿದೆ.