ದೇಶ

ನೋಟು ನಿಷೇಧದ ಬಗ್ಗೆ ಮುಖ್ಯಮಂತ್ರಿಗಳ ಸಮಿತಿ ಸಭೆ

Srinivas Rao BV
ನವದೆಹಲಿ: ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಮುಖ್ಯಮಂತ್ರಿಗಳ ಸಮಿತಿ ಸಭೆ ಡಿ.28 ರಂದು ನಡೆಯಲಿದೆ. 
ನ.8 ರಂದು ಕೇಂದ್ರ ಸರ್ಕಾರ ನೋಟು ನಿಷೇಧದ ಘೋಷಣೆಯನ್ನು ಮಾಡಿದ ಬಳಿಕ ನ.26 ರಂದು ನೀತಿ ಆಯೋಗ ಮುಖ್ಯಮಂತ್ರಿಗಳ ಸಮಿತಿ ರಚನೆ ಮಾಡಿ, ನೋಟು ನಿಷೇಧದಿಂದ ಉಂಟಾಗಿರುವ ಸಮಸ್ಯೆಗಳಿಗೆ ಪರಿಹಾರ ಹಾಗೂ ಸುಧಾರಣಾ ಕ್ರಮಗಳ ಬಗ್ಗೆ ಸಲಹೆ ನೀಡುವಂತೆ ಸೂಚಿಸಿತ್ತು. 
ಮುಖ್ಯಮಂತ್ರಿಗಳ ಸಭೆಗೆ ಚಂದ್ರಬಾಬು ನಾಯ್ಡು ಮುಖ್ಯಸ್ಥರಾಗಿದ್ದು, ಮಹಾರಾಷ್ಟ್ರ, ಮಧ್ಯಪ್ರದೇಶ, ಸಿಕ್ಕೀಂ ಹಾಗೂ ಪಾಂಡಿಚರಿ ರಾಜ್ಯಗಳ ಮುಖ್ಯಮಂತ್ರಿಗಳನ್ನು ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಬಿಹಾರ ಸಿಎಂ ನಿತೀಶ್ ಕುಮಾರ್ ಹಾಗೂ ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅವರನ್ನೂ ಸಮಿತಿಯ ಸದಸ್ಯ ಮಂಡಳಿಗೆ ಆಹ್ವಾನಿಸಲಾಗಿತ್ತಾದರೂ ಅವರು ಆಹ್ವಾನವನ್ನು ತಿರಸ್ಕರಿಸಿದ್ದರು. 
ಗ್ರಾಮೀಣ ಪ್ರದೇಶಗಳಿಗೆ ಕಡಿಮೆ ಮುಖಬೆಲೆಯ ನೋಟುಗಳನ್ನು ಹೆಚ್ಚು ಪೂರೈಕೆ ಮಾಡುವ ಮೂಲಕ ನಗದು ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಬೇಕೆಂದು ಮುಖ್ಯಮಂತ್ರಿಗಳ ಸಮಿತಿಯ ಮುಖ್ಯಸ್ಥ ಚಂದ್ರಬಾಬು ನಾಯ್ಡು ಆರ್ ಬಿಐ ಗೆ ಇತ್ತೀಚೆಗಷ್ಟೇ ಸಲಹೆ ನೀಡಿದ್ದರು. ನಗದು ರಹಿತ ವಹಿವಾಟು ಹಾಗೂ ಡಿಜಿಟಲ್ ವಹಿವಾಟು ಮಾತ್ರ ನಗದು ಬಿಕ್ಕಟ್ಟಿಗೆ ಸದ್ಯಕ್ಕೆ ಇರುವ ಸಮಸ್ಯೆ ಎಂದು ಚಂದ್ರಬಾಬು ನಾಯ್ಡು ಅಭಿಪ್ರಾಯಪಟ್ಟಿದ್ದರು. 
SCROLL FOR NEXT