ಪತ್ರಿಕಾಗೋಷ್ಠಿಯಲ್ಲಿ ಅರುಪ್ ರಹಾ
ನವದೆಹಲಿ: ಕೇಂದ್ರ ಸರ್ಕಾರ 36 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಫ್ರಾನ್ಸ್ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಆದರೆ ಭಾರತೀಯ ವಾಯುಪಡೆಗೆ 36 ಯುದ್ಧ ವಿಮಾನ ಸಾಕಾಗುವುದಿಲ್ಲ. ವಾಯುಪಡೆಯನ್ನು ಬಲಿಷ್ಠಗೊಳಿಸಲು ಕನಿಷ್ಠ 200ರಿಂದ 250 ರಫೇಲ್ ವಿಮಾನಗಳ ಅಗತ್ಯವಿದೆ ಎಂದು ನಿರ್ಗಮಿತ ವಾಯುಪಡೆ ಮುಖ್ಯಸ್ಥ ಅರುಪ್ ರಹಾ ಬುಧವಾರ ಹೇಳಿದ್ದಾರೆ.
ಅರುಪ್ ರಹಾ ಅವರು ಡಿ.31 ರಂದು ನಿವೃತ್ತಿ ಹೊಂದುತ್ತಿದ್ದು, ಇಂದು ತಮ್ಮ ಕೊನೆಯ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಹಾ, ವಾಯುಪಡೆಯ ಸಾಮರ್ಥ್ಯವನ್ನು ವೃದ್ಧಿಸಲು ಆಕಾಶದಲ್ಲಿ ಯುದ್ಧವಿಮಾನಗಳಿಗೆ ಇಂಧನ ತುಂಬಿಸುವ ವಿಮಾನಗಳ ಅವಶ್ಯಕತೆ ಇದೆ. ಜತೆಗೆ ಮಧ್ಯಮ ಭಾರದ ಕನಿಷ್ಠ 200 ಯುದ್ಧ ವಿಮಾನಗಳ ಅವಶ್ಯಕತೆ ಇದೆ. ರಫೇಲ್ ಮಧ್ಯಮ ಭಾರದ ಯುದ್ಧ ವಿಮಾನಗಳಲ್ಲಿ ಅತ್ಯುತ್ತಮವಾಗಿದ್ದು, ಪ್ರಸ್ತುತ 36 ಯುದ್ಧ ವಿಮಾನ ಮಾತ್ರ ಕೊಳ್ಳಲಾಗುತ್ತಿದೆ. ಮುಂದಿನ 5 ರಿಂದ 10 ವರ್ಷಗಳಲ್ಲಿ ಇನ್ನಷ್ಟು ರಫೇಲ್ ವಿಮಾನಗಳನ್ನು ಕೊಂಡರೆ ಉತ್ತಮ. ಇದಕ್ಕಾಗಿ ದೇಶದಲ್ಲಿಯೇ ವಿಮಾನ ನಿರ್ಮಾಣ ಕಾರ್ಯ ನಡೆಯಬೇಕು ಎಂದು ತಿಳಿಸಿದ್ದಾರೆ.
ಚೀನಾ ಮತ್ತು ಪಾಕಿಸ್ತಾನದಿಂದ ಭಾರತ ಭದ್ರತಾ ಸಮಸ್ಯೆ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ವಾಯು ಪಡೆಯನ್ನು ಇನ್ನಷ್ಟು ಬಲಿಷ್ಠ ಗೊಳಿಸಬೇಕಾದ ಅಗತ್ಯವಿದೆ. ವಾಯು ಪಡೆಯಲ್ಲಿ ಯುದ್ಧ ವಿಮಾನಗಳ ಕೊರತೆ ಇದೆ. 42 ಸ್ಕಾ್ವಡ್ರನ್ಗಳ ಬದಲಾಗಿ ಕೇವಲ 32 ಯುದ್ಧ ವಿಮಾನಗಳ ಸ್ಕಾ್ವಡ್ರನ್ಗಳು ವಾಯು ಪಡೆಯ ಬಳಿ ಇವೆ ಎಂದು ರಾಹಾ ಮಾಹಿತಿ ನೀಡಿದರು.
ರಾಹಾ ನಿವೃತ್ತಿ ನಂತರ ವಾಯು ಪಡೆಯ ಮುಖ್ಯಸ್ಥರವಾಗಿ ಬಿ.ಎಸ್.ಧನೋ ಅಧಿಕಾರ ಸ್ವೀಕರಿಸಲಿದ್ದಾರೆ.