ದೆಹಲಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ
ನವದೆಹಲಿ: ನವೆಂಬರ್ 8ರಂದು ಅಧಿಕ ಮೌಲ್ಯದ ನೋಟು ಅಮಾನ್ಯ ಮಾಡಿದ ನಂತರ ಎಷ್ಟು ಕಪ್ಪು ಹಣವನ್ನು ಮರಳಿ ಪಡೆಯಲಾಗಿದೆ, ದೇಶಕ್ಕೆ ಎಷ್ಟು ಆರ್ಥಿಕ ನಷ್ಟವಾಗಿದೆ ಮತ್ತು ಎಷ್ಟು ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬಹಿರಂಗಪಡಿಸಬೇಕು ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸವಾಲು ಹಾಕಿದ್ದಾರೆ.
ಇಂದು ದೆಹಲಿಯಲ್ಲಿ ಅವರು ಕಾಂಗ್ರೆಸ್ ಪಕ್ಷದ 132ನೇ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ನೋಟುಗಳ ಅಮಾನ್ಯತೆ ಯಜ್ಞವನ್ನು 50 ಕುಟುಂಬಗಳಿಗೆ ಬೇಕಾಗಿ ಮಾಡಿದರು. ಅನೇಕ ಜನಕ್ಕೆ ಭಾರೀ ತೊಂದರೆ, ನಷ್ಟವುಂಟಾಗಿದೆ. ಇದಕ್ಕೆ ಸರ್ಕಾರ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ನವೆಂಬರ್ 8ಕ್ಕೆ ಎರಡು ತಿಂಗಳು ಮೊದಲು ತಮ್ಮ ಬ್ಯಾಂಕ್ ಖಾತೆಗಳಲ್ಲಿ 25 ಲಕ್ಷಕ್ಕಿಂತ ಅಧಿಕ ಹಣವನ್ನು ಠೇವಣಿ ಇರಿಸಿದವರ ಹೆಸರುಗಳನ್ನು ಕೂಡ ಮೋದಿಯವರು ಬಹಿರಂಗಪಡಿಸಬೇಕು. ಬ್ಯಾಂಕುಗಳಿಂದ ವಾರಕ್ಕೆ 24,000 ರೂಪಾಯಿ ಹಿಂದಕ್ಕೆ ಪಡೆಯುವ ಮಿತಿಯನ್ನು ತೆಗೆದುಹಾಕಬೇಕು. ಮಿತಿ ಹೇರುವುದು ಜನರ ಹಣಕಾಸು ಸ್ವಾತಂತ್ರ್ಯವನ್ನು ಕಸಿದುಕೊಂಡಂತೆ ಎಂದು ಹೇಳಿದರು.
ನೋಟುಗಳ ನಿಷೇಧದ ನಂತರ ದೇಶದ ರೈತರಿಗೆ ಉಂಟಾದ ತೊಂದರೆಗೆ ಅವರು ಹೇಗೆ ಪರಿಹಾರ ಕೊಡುತ್ತಾರೆ ಎಂಬುದನ್ನು ಕೂಡ ಪ್ರಧಾನಿ ವಿವರಿಸಬೇಕು, ರೈತರ ಸಾಲ ಮನ್ನಾ ಮಾಡಬೇಕೆಂದು ರಾಹುಲ್ ಗಾಂಧಿ ಒತ್ತಾಯಿಸಿದರು.
ನೋಟು ನಿಷೇಧದಿಂದ ಹೆಚ್ಚಿನ ಪ್ರಮಾಣದಲ್ಲಿ ತೊಂದರೆಗೊಳಗಾಗಿರುವ ರೈತರ ಸಾಲ ಮನ್ನಾ ಮಾಡಿ ಶೇಕಡಾ 20ರಷ್ಟು ಬೋನಸ್ ಕೊಡಬೇಕು. ಬಿಪಿಎಲ್ ಕುಟುಂಬದಲ್ಲಿರುವ ಮಹಿಳೆಯರಿಗೆ ತಲಾ 25,000 ರೂಪಾಯಿ ನೀಡಬೇಕು ಎಂದರು.