ದೇಶ

ಬಾಡಿಗೆ ತಾಯಿಯ ಮೂಲಕ ಮಗು ಪಡೆಯುವ ತಾಯಂದಿರಿಗೂ ಹೆರಿಗೆ ರಜೆ ಅನ್ವಯ: ಬಾಂಬೆ ಹೈಕೋರ್ಟ್

Srinivas Rao BV

ಮುಂಬೈ: ಬಾಡಿಗೆ ತಾಯಿಯಿಂದ ಮಗು ಪಡೆದು ತಾಯ್ತನ ಅನುಭವಿಸುವವರೂ ಸಹ ಇತರ ಮಹಿಳೆಯರಂತೆ ಆರು ತಿಂಗಳ ಅವಧಿಯ ಹೆರಿಗೆ ರಜೆಗೆ ಅರ್ಹರಾಗಿರುತ್ತಾರೆ ಎಂದು ಬಾಂಬೆ ಹೈ ಕೋರ್ಟ್ ಮಹತ್ವದ ಆದೇಶ ನೀಡಿದೆ.
ಮಕ್ಕಳ ದತ್ತು ರಜೆ ಹಾಗೂ ನಿಯಮಗಳಿಗೆ ಸಂಬಂಧಿಸಿದ 551(C) ಹಾಗೂ (ಇ) ವಿಭಾಗದಲ್ಲಿ ಬಾಡಿಗೆ ತಾಯಿಯಿಂದ ತಾಯ್ತನ ಪಡೆಯುವ ಮಹಿಳೆಯರಿಗೆ ಹೆರಿಗೆ ಅವಧಿಯ ರಜೆ ನೀದಬಾರದೆಂದು ಹೇಳಲಾಗಿಲ್ಲ. ಈ ಅಂಶವನ್ನು ಪರಿಗಣಿಸಿ ಬಾಡಿಗೆ ತಾಯಿಯಿಂದ ಮಗು ಪಡೆದ ಮಹಿಳೆಯರಿಗೂ ಸ್ವಾಭಾವಿಕವಾಗಿ ತಾಯಿಯಾಗುವ ಮಹಿಳೆಯರಂತೆಯೇ ಹೆರಿಗೆ ಅವಧಿಯ 6 ತಿಂಗಳ ರಜೆ ನೀಡಬಹುದು ಎಂದು ಬಾಂಬೆ ಹೈಕೋರ್ಟ್ ನ ನ್ಯಾ.ಅನೂಪ್ ಮೊಹ್ತಾ, ನ್ಯಾ.ಜಿ.ಎಸ್ ಕುಲಕರ್ಣಿ ಅವರಿದ್ದ ಪೀಠ ಆದೇಶ ನೀಡಿದೆ.     
2004 ರಲ್ಲಿ ವಿವಾಹವಾಗಿದ್ದ ರೈಲ್ವೆ ಇಲಾಖೆಯಲ್ಲಿ ನೌಕರರಾಗಿರುವ  ಮಹಿಳೆಯೊಬ್ಬರು ಮಕ್ಕಳಿಲ್ಲದ ಕಾರಣ ಬಾಡಿಗೆ ತಾಯಿ ಮೂಲಕ ಮಗು ಪಡೆಯಲು ನಿರ್ಧರಿಸಿದ್ದರು. ಬಾಡಿಗೆ ತಾಯಿ ಗರ್ಭ ಧರಿಸಿ 33 ವಾರಗಳು ಕಳೆದ ನಂತರ ರೈಲ್ವೆ ಇಲಾಖೆಯ ನೌಕರರಾಗಿದ್ದ ಮಹಿಳೆ ಹೆರಿಗೆ ಅವಧಿಯ ರಜೆ ಕೋರಿ ರೈಲ್ವೆ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಬಾಡಿಗೆ ತಾಯಿಯ ಮೂಲಕ ತಾಯ್ತನ ಪಡೆಯುವವರಿಗೆ ಸಾಮಾನ್ಯ ತಾಯಂದಿರಿಗೆ ನೀಡುವ ಹೆರಿಗೆ ಅವಧಿಯ ರಜೆ ನೀಡಲು ಸಾಧ್ಯವಿಲ್ಲ ಎಂದು ರೈಲ್ವೆ ಇಲಾಖೆ ಹೇಳಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ವಿವಾದ ಬಗೆಹರಿದಿದ್ದು ಇತರರಂತೆ ರೈಲ್ವೆ ಇಲಾಖೆಯಲ್ಲಿ ನೌಕರರಾಗಿರುವ ಮಹಿಳೆಗೂ ಹೆರಿಗೆ ಅವಧಿಯ ರಜೆ ನೀಡಬೇಕೆಂದು ಕೋರ್ಟ್ ಆದೇಶಿಸಿದೆ.

SCROLL FOR NEXT