ನವದೆಹಲಿ: ಆಡಳಿತಾರೂಢ ಬಿಜೆಪಿ ಅಧೀನದಲ್ಲಿರುವ ಸಾರ್ವಜನಿಕ ಸಂಸ್ಥೆಗಳು ಜನರಿಂದ ಹಣವನ್ನು ಲೂಟಿ ಮಾಡುತ್ತಿವೆಯೇ ಹೊರತು ಕೆಲಸ ಮಾಡುತ್ತಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ಒಳಚರಂಡಿ ಕಾರ್ಮಿಕರ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಕೇಜ್ರಿವಾಲ್ ಅವರು, ದೆಹಲಿ ಅಭಿವೃದ್ಧಿಗೆ ತೆರಿಗೆ ಹೆಸರಿನಲ್ಲಿ ಸಾರ್ವಜನಿಕರು ನೀಡುತ್ತಿರುವ ಹಣವನ್ನು ಬಿಜೆಪಿ ಅಧೀನದಲ್ಲಿರುವ ಸಾರ್ವಜನಿಕ ಸಂಸ್ಥೆಯ ಅಧಿಕಾರಿಗಳು ಲೂಟಿ ಮಾಡುತ್ತಿದ್ದಾರೆ. ದೆಹಲಿ ಸಾರ್ವಜನಿಕ ಸಂಸ್ಥೆಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ಇದೊಂದು ದೊಡ್ಡ ಹಗರಣವಾಗಿದೆ ಎಂದು ಹೇಳಿದರು.
"ಭ್ರಷ್ಟಾಚಾರ ನಡೆದಿಲ್ಲವೆಂದಾದರೆ ತನಿಖೆಗೆ ನೀವೇಕೆ ಹೆದರುತ್ತಿದ್ದೀರಿ. ದಶಕಗಳಿಂದ ಈ ವ್ಯವಸ್ಥೆಯನ್ನು ಸಹಿಸಿಕೊಂಡು ಬರಲಾಗಿದ್ದು, ಇದೀಗ ತಿರುಗಿ ಬೀಳುವ ಸಮಯ. ಆರ್ ಟಿಐ ಮೂಲಕ ಸಾರ್ವಜನಿಕ ಸಂಸ್ಥೆಗಳ ಭ್ರಷ್ಟಾಚಾರವನ್ನು ಪ್ರಶ್ನಿಸಬಹುದಾಗಿದೆ. ಅಲ್ಲದೆ ಸೆಕ್ಷನ್ 486ರ ಅಡಿಯಲ್ಲಿ ದೆಹಲಿ ಸಾರ್ವಜನಿಕ ಸಂಸ್ಥೆಗಳ ಖಾತೆಗಳ ವರದಿ ಪಡೆಯುವ ಅಧಿಕಾರ ದೆಹಲಿ ಸರ್ಕಾರಕ್ಕಿದೆ. 2012-13ರಲ್ಲಿ ಎನ್ ಡಿಎಂಸಿಗೆ 526 ಕೋಟಿ ಅನುದಾನ ನೀಡಲಾಗಿತ್ತು. 2013-14ರಲ್ಲಿ 556 ಕೋಟಿ ಮತ್ತು 2014-15ರಲ್ಲಿ 545 ಕೋಟಿ ಅನುದಾನ ನೀಡಲಾಗಿತ್ತು. ಇದಲ್ಲದೆ 100 ಕೋಟಿ ಹೆಚ್ಚುವರಿ ಅನುದಾನ ಕೂಡ ಬಿಡುಗಡೆಯಾಗಿತ್ತು. ಹಾಗಾದರೆ ಈ ಹಣವೆಲ್ಲಾ ಎಲ್ಲಿಗೆ ಹೋಯಿತು.
ಇದೊಂದು ದೊಡ್ಡ ಹಗರಣವಾಗಿದ್ದು, ಇದನ್ನು ತನಿಖೆ ಮಾಡುವವರೆಗೂ ನಾವು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದರು.