ಮುಂಬೈ: ದೇಶದಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಶೀನಾ ಬೋರಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಇಂದ್ರಾಣಿ ಮುಖರ್ಜಿ, ಸಂಜೀವ್ ಖನ್ನಾ ಹಾಗೂ ಶ್ಯಾಮ್ ರೈ ಅವರನ್ನು ಜೈಲಿನಲ್ಲೇ ವಿಚಾರಣೆ ನಡೆಸಲು ಸಿಬಿಐ ಅಧಿಕಾರಿಗಳು ಶುಕ್ರವಾರ ಅನುಮತಿಯನ್ನು ಪಡೆದಿದ್ದಾರೆ.
ಈ ಕುರಿತಂತೆ ಮಾಹಿತಿ ನೀಡಿರುವ ಅಧಿಕಾರಿಗಳು, ಪ್ರಕರಣಕ್ಕೆ ಸಂಬಂಧಿಸದಂತೆ ಮತ್ತಷ್ಟು ಹೊಸ ಸತ್ಯಾಂಶಗಳು ತಿಳಿದುಬಂದಿದ್ದು, ಈ ಬಗ್ಗೆ ಇಂದ್ರಾಣಿ, ಖನ್ನಾ ಹಾಗೂ ಕಾರು ಚಾಲಕ ಶ್ಯಾಮ್ ರೈ ಮೂವರನ್ನು ವಿಚಾರಣೆ ನಡೆಸುವ ಅಗತ್ಯವಿದೆ. ಹೀಗಾಗಿ ವಿಚಾರಣೆ ನಡೆಸುವ ಅಗತ್ಯದ ಕುರಿತು ನ್ಯಾಯಾಲಯದಿಂದ ಅನುಮತಿ ಪಡೆಯಲಾಗಿದೆ ಎಂದು ಹೇಳಿದ್ದಾರೆ.
ಕಳೆದ ವರ್ಷ ಶೀನಾ ಬೋರಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀನಾ ತಾಯಿ ಇಂದ್ರಾಣಿ ಮುಖರ್ಜಿ ಹಾಗೂ ಆಕೆಯ ಗಂಡ ಪೀಟರ್ ಮುಖರ್ಜಿಯವರನ್ನು ನವೆಂಬರ್ 19 ರಂದು ಬಂಧನಕ್ಕೊಳಪಡಿಸಲಾಗಿತ್ತು. ಬಂಧನಕ್ಕೊಳಗಾದ ನಂತರ ಆರೋಪಿಗಳನ್ನು ಹೆಚ್ಚಿನ ಭದ್ರತೆಯೊಂದಿಗೆ ಅರ್ಥೂರ್ ರಸ್ತೆಯಲ್ಲಿರುವ ಜೈಲಿನಲ್ಲಿಡಲಾಗಿತ್ತು.