ದೇಶ

ಪ್ರತಿಭಟನೆ ವಾಪಸ್ ಪಡೆಯಲು ಒಪ್ಪಿದ ದೆಹಲಿ ಪೌರ ಸಿಬ್ಬಂದಿಗಳು

Srinivas Rao BV

ನವದೆಹಲಿ: ದೆಹಲಿಯ ಮೂರು ಸ್ಥಳೀಯ ಸಂಸ್ಥೆಗಳ ನೌಕರರು ಪ್ರತಿಭಟನೆ ವಾಪಸ್ ಪಡೆಯಲು ಒಪ್ಪಿದ್ದಾರೆ. ದೆಹಲಿ ಹೈಕೋರ್ಟ್ ನ ಮಧ್ಯಪ್ರವೇಶದ ಪರಿಣಾಮ ಪೌರ ಸಿಬ್ಬಂದಿಗಳು ಪ್ರತಿಭಟನೆಯನ್ನು ವಾಪಸ್ ಪಡೆದು ಕೆಲಸಕ್ಕೆ ಹಾಜರಾಗಲಿದ್ದಾರೆ. ನ್ಯಾ.ಜಿ ರೋಹಿಣಿ ಹಾಗೂ ನ್ಯಾ.ಜಯಂತ್ ನಾಯಕ್ ಇದ್ದ ಪೀಠ, ಜನವರಿ ತಿಂಗಳ ಸಂಬಳ ನೀಡಿರುವ ಹಿನ್ನೆಲೆಯಲ್ಲಿ ಕೆಲಸಕ್ಕೆ ಹಾಜರಾಗುವಂತೆ ಪೌರ ಸಿಬ್ಬಂದಿಗಳಿಗೆ ಸೂಚನೆ ನೀಡಿದೆ.
ಬಾಕಿ ಇರುವ ವೇತನ ಪಾವತಿ ಕುರಿತ ವಿಚಾರಣೆಯನ್ನು ಬುಧವಾರ ಫೆ.10 ರಂದು ಕೈಗೆತ್ತಿಕೊಳ್ಳುವುದಾಗಿ ದೆಹಲಿ ಹೈಕೋರ್ಟ್ ಹೇಳಿದೆ. ಪ್ರತಿಭಟನೆಯನ್ನು ಕೂಡಲೇ ವಾಪಸ್ ಪಡೆಯುವುದಾಗಿ ಹೇಳಿರುವ ನೌಕರರ ಸಂಘ ತಕ್ಷಣವೇ ಕೆಲಸಕ್ಕೆ ಹಾಜರಾಗುವುದಾಗಿ ಕೋರ್ಟ್ ಗೆ ತಿಳಿಸಿದೆ.
ಆದರೆ ಸಂಘಟನೆಯಲ್ಲಿ ಬಿರುಕು ಮೂಡಿದ್ದು, ಕೆಲವು ನೌಕರರು ಪ್ರತಿಭಟನೆಯನ್ನು ವಾಪಸ್ ಪಡೆಯುವುದಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ದೆಹಲಿ ಪೌರ ಸಿಬ್ಬಂದಿಗಳ ಪ್ರತಿಭಟನೆ ಬಗ್ಗೆ ಶುಕ್ರವಾರ ವಿಚಾರಣೆ ನಡೆಸಿದ್ದ ದೆಹಲಿ ನ್ಯಾಯಾಲಯ, ಸಫಾಯಿ ಕರ್ಮಚಾರಿಗಳ 38 ಒಕ್ಕೂಟಗಳಿಂದ ಪ್ರತಿಕ್ರಿಯೆ ಕೇಳಿತ್ತು. ವೇತನ ಸರಿಯಾಗಿ ಪಾವತಿ ಮಾಡದೇ ಇರುವುದನ್ನು ವಿರೋಧಿಸಿದ್ದ ಪೌರ ಸಿಬ್ಬಂದಿಗಳು ಕಳೆದ 13 ದಿನಗಳಿಂದ ದೆಹಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು.

SCROLL FOR NEXT