ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ನಡುವೆ ಸಂಘರ್ಷ
ನವದೆಹಲಿ: ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ರಾತ್ರಿ ಎರಡು ವಿದ್ಯಾರ್ಥಿ ಸಂಘಟನೆಗಳ ನಡುವೆ ಘರ್ಷಣೆ ನಡೆದಿರುವ ಬಗ್ಗೆ ವರದಿಯಾಗಿದೆ.
ಪಾರ್ಲಿಮೆಂಟ್ ದಾಳಿಯ ಅಪರಾಧಿ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದ್ದನ್ನು ನ್ಯಾಯಾಂಗ ಮರಣದಂಡನೆ ಎಂದು ಹೇಳಿ ಎಡ ಪಂಥೀಯ ವಿದ್ಯಾರ್ಥಿಗಳ ಸಂಘಟನೆಯೊಂದು ವಿವಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿತ್ತು .2013 ಫೆ. 9 ತಿಹಾರ್ ಜೈಲಿನಲ್ಲಿ ಅಫ್ಜಲ್ ಗುರುವನ್ನು ಗಲ್ಲಿಗೇರಿಸಲಾಗಿತ್ತು. ಈ ದಿನವನ್ನು ಸ್ಮರಿಸಿ, ವಿದ್ಯಾರ್ಥಿ ಸಂಘಟನೆಯು 'ಶಹೀದ್ ಅಫ್ಜಲ್ ಗುರು' ಎಂದು ಅಫ್ಜಲ್ ಗುರುವಿಗೆ ಜೈಕಾರ ಕೂಗಿದ್ದಾರೆ. ಮಾತ್ರವಲ್ಲದೆ ದೇಶ ವಿರೋಧಿ ಘೋಷಣೆ ಕೂಗಿದ ವಿದ್ಯಾರ್ಥಿಗಳು ಕಾಶ್ಮೀರಿ ವಲಸೆಗಾರರಿಗೆ ಬೆಂಬಲ ಸೂಚಿಸಿ ಆಜಾದ್ ಕಾಶ್ಮೀರ್ ಹೋರಾಟಕ್ಕೆ ಜೈ ಎಂದಿದ್ದಾರೆ.
ಈ ಕಾರ್ಯಕ್ರಮ ನಡೆಸಲು ವಿವಿ ಅನುಮತಿ ನೀಡಿಲ್ಲವಾಗಿದ್ದರೂ, ವಿದ್ಯಾರ್ಥಿಗಳು ವಿವಿಯ ಸುತ್ತ ಪೋಸ್ಟರ್‌ಗಳನ್ನು ಅಂಟಿಸಿ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ವಿದ್ಯಾರ್ಥಿ ಸಂಘಟನೆಯ ಈ ನಡೆಯನ್ನು ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿ ತೀವ್ರವಾಗಿ ವಿರೋಧಿಸಿತ್ತು. ಕಾರ್ಯಕ್ರಮಕ್ಕೆ ಎಬಿವಿಪಿ ಕಾರ್ಯಕರ್ತರು ತಡೆಯೊಡ್ಡಿದ್ದು ಈ ವೇಳೆ ಎರಡು ಸಂಘಟನೆಗಳ ನಡುವೆ ಘರ್ಷಣೆ ನಡೆದಿದೆ. ವಿದ್ಯಾರ್ಥಿಗಳ ಜಗಳ ತಾರಕಕ್ಕೇರುತ್ತಿದ್ದಂತೆ ಕಾಲೇಜು ಅಧಿಕೃತರು ಪೊಲೀಸರನ್ನು ಕರೆಸಿ ವಿದ್ಯಾರ್ಥಿಗಳನ್ನು ಸಂಭಾಳಿಸಿದ್ದಾರೆ.
ಈ ಘಟನೆ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಜೆಎನ್‌ಯು ಉಪ ಕುಲಪತಿ, ನಾವಿಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದು ವಿದ್ಯಾರ್ಥಿಗಳ ಹೇಳಿದ ಕಾರಣ ನಾವು ಅನುಮತಿ ನೀಡಿದ್ದೆವು. ಆದರೆ ಅದು ಪ್ರತಿಭಟನೆ ಎಂದು ಗೊತ್ತಾದ ಕೂಡಲೇ ಅದನ್ನು ನಿಲ್ಲಿಸಿ ಕ್ಯಾಂಪಸ್‌ನಲ್ಲಿ ಶಾಂತಿ ಕಾಪಾಡಿಕೊಂಡೆವು ಎಂದಿದ್ದಾರೆ.