ದೇಶ

ಒಂಟಿ ಸಲಗದ ರೌದ್ರಾವತಾರಕ್ಕೆ ದಿಕ್ಕಾಪಾಲಾಗಿ ಓಡಿದ ಜನ

Manjula VN

ಸಿಲಿಗುರಿ: ಪಶ್ಚಿಮ ಬಂಗಾಳದ ಸಿಲಿಗುರಿಯ ಜಲ್ಪೈಗುರಿ ವಸತಿ ಪ್ರದೇಶವೊಂದರ ಮೇಲೆ ಆನೆಯೊಂದು ದಾಳಿ ನಡೆಸಿದ್ದು, ಆನೆಯ ರೌದ್ರವತಾರಕ್ಕೆ ಅಲ್ಲಿನ ನೂರಾರು ಮನೆಗಳು ನಾಶವಾಗಿರುವ ಘಟನೆ ಮಂಗಳವಾರ ನಡೆದಿದೆ.

ನಿನ್ನೆ ಕಾಡಿನಿಂದ ನಾಡಿಗೆ ಬಂದ ಮದವೇರಿದ ಒಂಟಿ ಸಲಗವೊಂದು ಸಿಲಿಗುರಿಯ ವಸದಿ ಪ್ರದೇಶವೊಂದರ ಮೇಲೆ ದಾಳಿ ಮಾಡಿದೆ. ಈ ವೇಳೆ ಸಿಕ್ಕ ಸಿಕ್ಕ ಮನೆಯ ಮೇಲೆಲ್ಲಾ ದಾಳಿ ಮಾಡಿದ ಆನೆ ಜನರನ್ನು ಬೆದರಿಸಿದೆ. ಈ ವೇಳೆ ಜನರ ಕೂಗಾಟಗಳನ್ನು ಕಂಡ ಆನೆ ಮತ್ತಷ್ಟು ಕೋಪಗೊಂಡು ಸಿಕ್ಕ ಸಿಕ್ಕ ಕಡೆಗಳೆಲ್ಲಾ ಓಡಾಡಿದೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳದಲ್ಲಿನ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಹಾಗೂ ಆನೆಗೆ ಆರವಳಿಕೆ ನೀಡಲು ಹರಸಾಹಸ ಪಡುವಂತಾಯಿತು.

ಆನೆ ದಾಳಿಯಿಂದಾಗಿ ಭಯಭೀತರಾದ ಜನ ದಿಕ್ಕಾಪಾಲಾಗಿ ಓಡಲು ಆರಂಭಿಸಿದ್ದರು. ಇದರಿಂದಾಗಿ ಆನೆಯನ್ನು ನಿಯಂತ್ರಣಕ್ಕೆ ತರಲು ಭಾರೀ ಕಷ್ಟವಾಗಿತ್ತು. ನಂತರ ಜನರಿಗೆ ಭಯಪಡದಂತೆ ತಿಳಿಸಲಾಯಿತು. ಆನೆಗೆ ಈಗಾಗಲೇ ಅರವಳಿಕೆಯನ್ನು ನೀಡಲಾಗಿದ್ದು, ಅವಳಿಕೆ ಮದ್ದು ದೇಹದ ಪರಿಣಾಮ ಬೀರಲು ಕೆಲವು ಸಮಯವಾಗುತ್ತದೆ. ಹೀಗಾಗಿ ಯಾರೂ ಭಯಪಡದಂತೆ ತಿಳಿಸಲಾಯಿತು. ನಂತರ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಯಿತು. ಪ್ರಸ್ತುತ ಆನೆ ಆಶೀಗರ್ ನಲ್ಲಿ ಇರಿಸಲಾಗಿದ್ದು, ಶೀಘ್ರದಲ್ಲೇ ಅರಣ್ಯಕ್ಕೆ ಸಾಗಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

SCROLL FOR NEXT