ದೇಶ ವಿರೋಧಿ ಚಟುವಟಿಕೆ: ಮಾಜಿ ಯೋಧರಿಂದ ಪದವಿ ಹಿಂತಿರುಗಿಸುವ ಎಚ್ಚರಿಕೆ
ನವದೆಹಲಿ; ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‍ಯು)ದ ದೇಶ ವಿರೋಧಿ ಘೋಷಣೆ ಕೂಗಿದ ಪ್ರಕರಣ ದಿನದಿಂದ ದಿನಕ್ಕೆ ತೀವ್ರತೆಯನ್ನು ಪಡೆದುಕೊಳ್ಳುತ್ತಿದ್ದು, ಇದೀಗ ವಿದ್ಯಾರ್ಥಿಗಳ ಈ ವರ್ತನೆಗೆ ಮಾಜಿ ಯೋಧರು ವಿರೋಧ ವ್ಯಕ್ತಪಡಿಸಿ ಶನಿವಾರ ಪ್ರತಿಭಟನೆಗಿಳಿದಿದ್ದಾರೆ.
ಅಫ್ಜಲ್ ಗುರು ಗಲ್ಲು ಶಿಕ್ಷೆ ವಿರೋಧಿಸಿ ಕಾಲೇಜಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಇಲ್ಲಿನ ವಿದ್ಯಾರ್ಥಿಗಳು ಕಾಲೇಜಿನಲ್ಲಿ ದೇಶ ವಿರೋಧಿ ಚಟುವಟಿಕೆಯನ್ನು ನಡೆಸುತ್ತಿದ್ದಾರೆಂದು ಹೇಳಿರುವ ಮಾಜಿ ಯೋಧರು, ಇದೀಗ ತಮ್ಮ ಪದವಿಯನ್ನು ಹಿಂತಿರುಗಿಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.
ಸಂಸತ್ ಮೇಲೆ ದಾಳಿ ನಡೆಸಿದ ಆರೋಪಿ ಅಫ್ಜಲ್ ಗುರು ಗಲ್ಲಿಗೇರಿಸಿದ್ದನ್ನು ಖಂಡಿಸಿದ್ದಲ್ಲದೆ ಇದೊಂದು ಜ್ಯುಡಿಶಿಯಲ್ ಕಿಲ್ಲಿಂಗ್ ಎಂದು ಆರೋಪಿಸಿ ವಿದ್ಯಾರ್ಥಿಗಳ ಗುಂಪೊಂದು ಕಾರ್ಯಕ್ರಮವೊಂದನ್ನು ಫೆಬ್ರವರಿ 9ರಂದು ವಿವಿಯಲ್ಲಿ ಆಯೋಜಿಸಿತ್ತು. ಕಾರ್ಯಕ್ರನದಲ್ಲಿ ಅಫ್ಜಲ್ ಗುರು ಪರ ಹಾಗೂ ಭಾರತ ವಿರೋಧಿ ಘೋಷಣೆಗಳನ್ನು ಕೂಗಿತ್ತು. ಇದಕ್ಕೆ ಕಾಶ್ಮೀರಿ ವಲಸಿಗರ ಹಾಗೂ ಆಜಾದ್ ಕಾಶ್ಮೀರಿ ಪರ ವಿದ್ಯಾರ್ಥಿಗಳ ಗುಂಪು ಸಹಮತ ವ್ಯಕ್ತಪಡಿಸಿತ್ತು.
ನಂತರ ಈ ವಿಷಯವಿವಿ ಗಮನಕ್ಕೆ ಬಂದಿತ್ತು. ಕಾಲೇಜು ಕ್ಯಾಂಪಸ್ ನ ಶಾಂತಿ ವಾತಾವರಣ ಹಾಳಾಗುತ್ತೆ ಎಂಬ ನಿಟ್ಟಿನಲ್ಲಿ ಅಫ್ಜಲ್ ಗುರುವನ್ನು ಬೆಂಬಲಿಸಿ ಯಾವುದೇ ಕಾರ್ಯಕ್ರಮ ನಡೆಸಲು ಯೂನಿರ್ವಸಿಟಿಯ ಆಡಳಿತ ಮಂಡಳಿ ಪರವಾನಿಗೆ ಕೊಟ್ಟಿರಲಿಲ್ಲ. ಆದರೆ ವಿದ್ಯಾರ್ಥಿ ಸಂಘಟಕರು ಅಫ್ಜಲ್ ಗುರು ಜ್ಯುಡಿಶಿಯಲ್ ಹತ್ಯೆಯನ್ನು ಖಂಡಿಸಿ ನಡೆಸುತ್ತಿರುವ ಪ್ರತಿಭಟನಾ ಮೆರವಣಿಗೆ ಬನ್ನಿ ಎಂದು ಆಹ್ವಾನಿಸಿ ಕ್ಯಾಂಪಸ್ ಸುತ್ತಮುತ್ತ ಪೋಸ್ಟರ್ ಗಳನ್ನು ಅಂಟಿಸಿದ್ದರು.
ಆದರೆ, ಯೂನಿರ್ವಸಿಟಿಯೊಳಗೆ ಈ ರೀತಿಯ ಕಾರ್ಯಕ್ರಮ ನಡೆಸೋದಕ್ಕೆ ಬಿಜೆಪಿಯ ಅಂಗಸಂಸ್ಥೆಯಾದ ಎಬಿವಿಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಉಪಕುಲಪತಿಗೆ ದೂರು ನೀಡಿತ್ತು. ಇದನ್ನು ತಿಳಿದ ಮತ್ತೊಂದು ವಿದ್ಯಾರ್ಥಿ ಗುಂಪು ನಾವು ಕಾರ್ಯಕ್ರಮ ನಡೆಸಿಯೇ ತೀರುತ್ತೇವೆಂದು ಎಂದು ಸೆಡ್ಡು ಹೊಡೆದಿತ್ತು. ನಂತರ ಎಬಿವಿಪಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ಎರಡೂ ವಿದ್ಯಾರ್ಥಿ ಸಂಘಟನೆಗಳು ವಿವಿಯಲ್ಲಿ ಪ್ರತಿಭಟನೆ ನಡೆಸಿದ್ದವು.
ಹೀಗಾಗಿ ವಿವಿ ಆಡಳಿತ ಮಂಡಳಿಯು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ್ದ ಪೊಲೀಸರು ದೇಶದ್ರೋಹದ ಆರೋಪದ ಮೇಲೆ ಜವಾಹರ್‍ಲಾಲ್ ನೆಹರೂ ವಿಶ್ವವಿದ್ಯಾಲಯ(ಜೆಎನ್‍ಯು)ದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರನ್ನು ಬಂಧನಕ್ಕೊಳಪಡಿಸಿದ್ದರು. ಅಲ್ಲದೆ, ಪಟಿಯಾಲ ಹೌಸ್ ಕೋರ್ಟ್ ಗೆ ಹಾಜರು ಪಡಿಸಿದರು. ವಿಚಾರಣೆ ನಡೆಸಿದ ಕೋರ್ಟ್, ಆರೋಪಿಯನ್ನು ಮೂರು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿತ್ತು.
ನಂತರ ಪ್ರಕರಣ ಸಂಬಂದ ತನಿಖೆ ನಡೆಸಿದ್ದ ವಿವಿ ಶಿಸ್ತು ಸಮಿತಿಯಿಂದ ಬಂದ ಮಧ್ಯಂತರ ವರದಿ ಪಡೆದುಕೊಂಡು ಎಂಟು ವಿದ್ಯಾರ್ಥಿಗಳ ವಿರುದ್ಧ ಶೈಕ್ಷಣಿಕ ಚಟುವಟಿಕೆಯಲ್ಲಿ ಭಾಗವಹಿಸದಂತೆ ನಿಷೇಧ ಹೇರಿತ್ತು. ಇದಕ್ಕೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗಿಳಿದಿತ್ತು.
ಪ್ರಕರಣ ಸಂಬಂಧ ಹೇಳಿಕೆ ನೀಡಿದ್ದ ಕೇಂದ ಗೃಹ ಸಚಿವ ರಾಜನಾಥ್ ಸಿಂಗ್ ಅವರು, ದೇಶ ವಿರೋಧಿ ಕೃತ್ಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದರು.
ದೇಶ ವಿರೋಧಿ ಘೋಷಣೆಗಳು ಹಾಗೂ ದೇಶದ ಏಕತೆ ಮತ್ತು ಸಮಗ್ರತೆಯನ್ನು ಪ್ರಶ್ನಿಸುವುದನ್ನು ಎಂದಿಗೂ ಸಹಿಸುವುದಿಲ್ಲ. ತಾಯಿ ಭಾರತಾಂಬೆಗೆ ಅವಮಾನ ಮಾಡುವುದನ್ನು ಎಂದಿಗೂ ಸಹಿಸುವುದಿಲ್ಲ. ದೇಶ ವಿರೋಧಿ ಕೃತ್ಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಿಕ್ಷಣ ಸಚಿವೆ ಸ್ಮೃತಿ ಇರಾನಿ ಅವರು ಹಳಿದ್ದಾರೆ.