ದೇಶ

ದೋಸೆ ಬೆಲೆ ಕಡಿಮೆಯಾಗದೇ ಇರುವುದಕ್ಕೆ ಕಾವಲಿಯೇ ಕಾರಣ!

Rashmi Kasaragodu
ಕೊಚ್ಚಿ: ಹಣದುಬ್ಬರ ದರ ಏರಿಕೆ ಆದ ಕೂಡಲೇ ದಕ್ಷಿಣ ಭಾರತೀಯರ ಅಚ್ಚುಮೆಚ್ಚಿನ ತಿಂಡಿಯ ದೋಸೆಯ ಬೆಲೆ ಏರಿಕೆಯಾಗುತ್ತದೆ. ಹಣದುಬ್ಬರ ದರ ಕಡಿಮೆಯಾದರೆ ದೋಸೆಯ ಬೆಲೆ ಯಾಕೆ ಕಡಿಮೆಯಾಗುವುದಿಲ್ಲ? 
ಶನಿವಾರ ಫೆಡರಲ್ ಬ್ಯಾಂಕ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ದೋಸೆ ಪ್ರಿಯ ಇಂಜಿನಿಯರಿಂಗ್ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ನೀಡಿದ ಉತ್ತರವೇನು ಗೊತ್ತಾ?

ದೋಸೆ ಮಾಡುವ ವಿಧಾನದಲ್ಲಿ ನಾವು ಯಾವುದೇ ಬದಲಾವಣೆ ಕಂಡುಕೊಂಡಿಲ್ಲ. ಈಗಲೂ ನಾವು ದೋಸೆ ಹಿಟ್ಟನ್ನು ಕಾವಲಿ (ದೋಸೆ ಹೆಂಚು) ಮೇಲೆ ಹೊಯ್ಯುತ್ತಿದ್ದೇವೆ. ಇದರ ತಂತ್ರಜ್ಞಾನದಲ್ಲಿ ನಾವು ಯಾವುದೇ ಬೆಳವಣಿಗೆಯನ್ನು ಕಂಡುಕೊಂಡಿಲ್ಲ.

ಅದೇ ವೇಳೆ ಕೇರಳದಂಥಾ ರಾಜ್ಯದಲ್ಲಿ ದೋಸೆ ಮಾಡುವ ವ್ಯಕ್ತಿಯ ಸಂಬಳವೂ ಜಾಸ್ತಿಯಾಗುತ್ತಾ ಹೋಗುತ್ತದೆ.

ಇದೀಗ ಹೆಚ್ಚಿನ ಜನರು ತಂತ್ರಜ್ಞಾನವನ್ನು ಬಳಸಿ ತಮ್ಮ ಕೆಲಸಗಳನ್ನು ಸುಲಭ ಹಾಗೂ ಹೆಚ್ಚು ಲಾಭದಾಯಕವಾಗಿ ಮಾಡಿಕೊಳ್ಳುತ್ತಿದ್ದಾರೆ. ಕಾರ್ಖಾನೆ ಅಥವಾ ಬ್ಯಾಂಕಿಂಗ್ ಕೆಲಸಗಳಲ್ಲಿ ತಂತ್ರಜ್ಞಾನದ ಸಹಾಯದಿಂದ ಹೆಚ್ಚು ಲಾಭದಾಯಕವಾಗುವಂತೆ ಕೆಲಸ ಮಾಡಲಾಗುತ್ತದೆ.

ಹೀಗಿರುವಾಗ ಏನಾಗುತ್ತದೆ ಎಂದರೆ ದೇಶದ ಆರ್ಥಿಕತೆ ಅಭಿವೃದ್ಧಿ ಹೊಂದುವ ವೇಳೆ ತಂತ್ರಜ್ಞಾನವೂ ಅಭಿವೃದ್ದಿ ಹೊಂದುತ್ತದೆ. ಅದೇ ವೇಳೆ ತಂತ್ರಜ್ಞಾನ ಅಭಿವೃದ್ಧಿ ಹೊಂದದೇ ಇರುವ ವಲಯಗಳಲ್ಲಿ ಯಾವುದೇ ಅಭಿವೃದ್ಧಿ ಕಂಡುಬರುವುದಿಲ್ಲ. ಇಲ್ಲಿ ದೋಸೆಗೆ ಸಂಭವಿಸಿದ್ದು ಅದೇ ಎಂದು ರಾಜನ್ ಉತ್ತರಿಸಿದ್ದಾರೆ.
SCROLL FOR NEXT