ಮುಂಬೈ: ಮುಂಬೈನಲ್ಲಿ ನಡೆದ ಮೇಕ್ ಇಂಡಿಯಾ ಸಪ್ತಾಹದ ವೇಳೆಯಲ್ಲಿನ ಅಗ್ನಿ ಅವಘಡ ಪ್ರಕರಣ ಸಾಕಷ್ಟು ತಿರುವು ಪಡೆಯುತ್ತಿದ್ದು, ಅಗ್ನಿ ದುರಂತದ ಹಿಂದೆ ಕಾಣದ ಕೈಗಳ ಕೆಲಸವಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ.
ಈಗಾಗಲೇ ಪ್ರಕರಣ ಸಂಬಂಧ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ತನಿಖೆಗೆ ಆದೇಶಿಸಿದ್ದು, ಅಗ್ನಿ ದುರಂತಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಭಾನುವಾರ ಸೃಷ್ಟಿಯಾದ ಆಂತಕದ ಹಿಂದೆ ಉಗ್ರರ ಅಥವಾ ಕೆಲ ಕಿಡಿಕೇಡಿಗಳ ಕೈವಾಡವಿರಬಹುದು ಎಂದು ತನಿಖೆ ನಡೆಸುತ್ತಿರುವ ಅಧಿಕಾರಿಗಳು ಶಂಕಿಸಿದ್ದಾರೆ. ಮತ್ತೊಂದೆಡೆ ಕಾರ್ಯಕ್ರಮಕ್ಕೆ ಅಳವಡಿಸಲಾಗಿದ್ದ ಹೈ ವೋಲ್ಟೇಜ್ ವಿದ್ಯುತ್ ನಿಂದಾಗಿ ಉಂಟಾದ ಶಾರ್ಟ್ ಸರ್ಕ್ಯೂಟ್ ಕೂಡ ಕಾರಣ ಎಂದು ಹೇಳಲಾಗುತ್ತಿದೆ.
ಹೀಗಾಗಿ ತನಿಖಾಧಿಕಾರಿಗಳು ಈ ಎಲ್ಲ ಆಯಾಮಗಳನ್ನು ಕೇಂದ್ರವಾಗಿರಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪ್ರಸ್ತುತ ಘಟನಾ ಸ್ಥಳದಿಂದ ಐದು ಪ್ರಮುಖ ಸಾಕ್ಷಿಗಳನ್ನು ಕಲೆ ಹಾಕಿರುವ ಪೊಲೀಸರು, ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ. ಕಾರ್ಯಕ್ರಮಕ್ಕೆ ಸಾಕಷ್ಟು ಮುಂಚಿತವಾಗಿ ವೇದಿಕೆ ಸಿದ್ಧಪಡಿಸಿ ಆಯೋಜಕರಿಗೆ ಬಿಟ್ಟುಕೊಟ್ಟಿದ್ದು, ಅದಕ್ಕೂ ಮೊದಲೇ ಸುರಕ್ಷತಾ ಕ್ರಮಗಳನ್ನು ಪರೀಕ್ಷಿಸಲಾಗಿತ್ತು ಎಂದು ಸೆಟ್ ಡಿಸೈನರ್ ನಿತಿನ್ ಚಂದ್ರಕಾಂತ್ ದೇಸಾಯಿ ಹೇಳಿದ್ದಾರೆ. ಅಲ್ಲದೆ ವೇದಿಕೆಯಲ್ಲಿ ಸುಡುಮದ್ದು ಮತ್ತು ಗ್ಯಾಸ್ ಬಳಸುವ ಉಪಕರಣಗಳನ್ನು ಅಳವಡಿಸಲಾಗಿತ್ತು. ಬಹುಶಃ ಇದೇನಾದರು ಬೆಂಕಿ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಅವರು ಶಂಕಿಸಿದ್ದಾರೆ.
ಒಟ್ಟಾರೆ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ ಮೇಕ್ ಇನ್ ಇಂಡಿಯಾದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸಿದ್ದ ವೇಳೆಯಲ್ಲಿಯೇ ಅಗ್ನಿ ದುರಂತ ಸಂಭವಿಸಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.