ನವದೆಹಲಿ: ಪಟಿಯಾಲಾ ಹೌಸ್ ಕೋರ್ಟ್ ಇಂದು ಮತ್ತೊಮ್ಮೆ ಮತ್ತೊಂದು ಹೈಡ್ರಾಮಾಗೆ ಸಾಕ್ಷಿಯಾಯಿತು. ವಕೀಲರ ಎರಡು ಗುಂಪುಗಳು ಕೋರ್ಟ್ ಆವರಣದಲ್ಲಿ ಘೋಷಣೆ ಕೂಗಿ, ಪರಸ್ಪರ ಬಡಿದಾಡಿಕೊಂಡಿದ್ದಲ್ಲದೇ ಮತ್ತೆ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ.
ವಕೀಲರ ಒಂದು ಗುಂಪು ಕನ್ಹಯ್ಯ ಪರವಾಗಿ ಮತ್ತೊಂದು ಗುಂಪು ಕನ್ಹಯ್ಯ ವಿರೋಧವಾಗಿ ಘೋಷಣೆ ಕೂಗುತ್ತಿದ್ದರು. ಅಲ್ಲಿ ಏನಾಗಿದೆ ಎಂದು ನೋಡಲು ಪೊಲೀಸರು ಇದ್ದ ಸ್ಥಳದಲ್ಲೇ ಹೋದೆ. ಅಷ್ಟರಲ್ಲಿ ಕನ್ಹಯ್ಯ ವಿರೋಧಿ ಗುಂಪಿನ ವಕೀಲರೊಬ್ಬರು ನನ್ನ ಪೋಟೋ ತೆಗೆದು ಕೊಂಡು ನನಗೆ ಥಳಿಸಿದರು ಎಂದು ಆಂಗ್ಲ ಚಾನೆಲ್ ವರದಿಗಾರರು ಹೇಳಿದ್ದಾರೆ.
ವಕೀಲರಿಂದ ನನ್ನ ಮೇಲೆ ಹಲ್ಲೆ ನಡೆಯುತ್ತಿದ್ದರೂ ಪೊಲೀಸರು ಸುಮ್ಮನೆ ನೋಡುತ್ತಾ ನಿಂತಿದ್ದರೇ ಹೊರತು ನನ್ನನ್ನು ರಕ್ಷಿಸಲು ಬರಲಿಲ್ಲ ಎಂದು ಆರೋಪಿಸಿದ್ದಾರೆ. ನನ್ನನ್ನು ರಕ್ಷಿಸಿ ಎಂದು ಪದೇ ಪದೇ ಕೇಳಿಕೊಂಡರು ಯಾರೊಬ್ಬರು ನನ್ನ ಸಹಾಯಕ್ಕೆ ಬರಲಿಲ್ಲ ಎಂದು ತಿಳಿಸಿದ್ದಾರೆ.
ರಾಷ್ಟ್ರದ್ರೋಹ ಆಪಾದನೆಯಲ್ಲಿ ಬಂಧಿತರಾಗಿರುವ ಕನ್ಹಯ್ಯ ಕುಮಾರ್ ಅವರನ್ನು ಎರಡು ದಿನಗಳ ಹಿಂದೆ ಹಾಜರು ಪಡಿಸುವ ವೇಳೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯದ ಹೊರಗೆ ಸಂಭವಿಸಿದ ಹಿಂಸಾಚಾರಗಳ ಸಂಬಂಧ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದು. ಜೆಎನ್ ಯು ವಿದ್ಯಾರ್ಥಿಗಳ ವಿರುದ್ಧ ಕಠಿಣ ಮಾರ್ಗ ಸೂಚಿ ಅನುಸರಿಸುವಂತೆ ಸುಪ್ರೀಂ ಕೋರ್ಟ್ ತಿಳಿಸಿದೆ.