ದೇಶ

ಮಹಿಳೆಯರು ಕಾರ್ಯನಿರ್ವಹಿಸುವ ಸ್ಥಳಗಳಲ್ಲಿ ಶಿಶುವಿಹಾರ ಕಡ್ಡಾಯಕ್ಕೆ ಕೇಂದ್ರ ಸರ್ಕಾರ ಚಿಂತನೆ

Sumana Upadhyaya

ನವದೆಹಲಿ: ಮಹಿಳೆಯರು ಮಕ್ಕಳಾದ ನಂತರವೂ ಕೆಲಸಕ್ಕೆ ಸೇರುವುದನ್ನು ಪ್ರೋತ್ಸಾಹಿಸಲು, ಅವರು ಕೆಲಸ ಮಾಡುವ ಸ್ಥಳಗಳಲ್ಲಿ ಅವರ ಮಕ್ಕಳಿಗೆ ಡೇಕೇರ್(ಶಿಶು ವಿಹಾರ) ಕೇಂದ್ರಗಳನ್ನು ತೆರೆಯುವುದನ್ನು ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ.

ಪ್ರಸ್ತುತ ಮಹಿಳೆಯರು ಕೆಲಸ ಮಾಡುವ ಸ್ಥಳಗಳಲ್ಲಿ ಅವರ ಮಕ್ಕಳನ್ನು ನೋಡಿಕೊಳ್ಳಲು ಶಿಶುವಿಹಾರ ಕೇಂದ್ರಗಳನ್ನು ತೆರೆಯುವುದನ್ನು ಕಡ್ಡಾಯಗೊಳಿಸುವ ಅನೇಕ ಕಾರ್ಮಿಕ ಕಾಯ್ದೆಗಳು ನಮ್ಮಲ್ಲಿವೆ. ತೋಟದ ಕಾರ್ಮಿಕರ ಕಾಯ್ದೆ, ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಗಳಲ್ಲಿ ಶಿಶು ವಿಹಾರ ಕೇಂದ್ರಗಳನ್ನೂ ಕಡ್ಡಾಯವಾಗಿ ನಡೆಸಬೇಕೆಂಬುದಿದೆ. ಆದರೆ ಅವುಗಳು ಸರಿಯಾಗಿ ಜಾರಿಗೆ ಬರುತ್ತಿಲ್ಲ.

'' ಯಾವುದೇ ವ್ಯತ್ಯಾಸವಿಲ್ಲದೆ ಮಹಿಳೆಯರು ಕೆಲಸ ಮಾಡುವ ಎಲ್ಲಾ ಕಡೆಗಳಲ್ಲಿ ಅವರ ಮಕ್ಕಳನ್ನು ನೋಡಿಕೊಳ್ಳಲು ವ್ಯವಸ್ಥೆ ಮಾಡುವಂತೆ ಅವರ ಮಾಲೀಕರಿಗೆ ಕಡ್ಡಾಯ ಮಾಡಿ ಕಾನೂನು ತರಬೇಕೆನ್ನುವ ಪ್ರಸ್ತಾಪ ಇಲಾಖೆಯ ಮುಂದೆ ಇದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಇಲಾಖೆ ಈಗಾಗಲೇ ಕಾರ್ಯದರ್ಶಿಗಳ ಸಮಿತಿಗೆ ಪ್ರಸ್ತಾವನೆಯನ್ನು ಸಲ್ಲಿಸಿದೆ. ಇದರ ಪ್ರಾಯೋಗಿಕ ಯೋಜನೆಯನ್ನು ಮುಂದಿನ ತಿಂಗಳು ರಾಜಸ್ತಾನದಲ್ಲಿ ಆರಂಭಿಸಲಾಗುತ್ತದೆ.

ಕೇಂದ್ರ ಸರ್ಕಾರದಡಿ, ಈಗಾಗಲೇ ದೇಶಾದ್ಯಂತ ಸುಮಾರು 22 ಸಾವಿರ ರಾಜೀವ್ ಗಾಂಧಿ ರಾಷ್ಟ್ರೀಯ ಶಿಶುವಿಹಾರ ಕೇಂದ್ರಗಳಿವೆ. ಆದರೆ ಇದು ಅಗತ್ಯಕ್ಕಿಂತ ತೀರಾ ಕಡಿಮೆಯಾಗಿದೆ. ಉದ್ಯೋಗಕ್ಕೆ ಹೋಗುವ ಮಹಿಳೆಯರಿಗೆ ತಮ್ಮ ಮಕ್ಕಳನ್ನು ಬಿಡಲು ಶಿಶುವಿಹಾರ ಕೇಂದ್ರಗಳ ಅಗತ್ಯವಿದೆ ಎನ್ನುತ್ತಾರೆ ಅಧಿಕಾರಿಗಳು.

ಶಿಶು ವಿಹಾರ ಕೇಂದ್ರಗಳನ್ನು ಸ್ಥಾಪಿಸುವ ಕುರಿತ ಪ್ರಸ್ತಾಪವನ್ನು ಅಂತರ ಸಚಿವಾಲಯದ ಗುಂಪು ಅಂತಿಮಗೊಳಿಸಿದೆ. ಅದರಲ್ಲಿ ಕಾರ್ಮಿಕ ಸಚಿವಾಲಯ, ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ ಸಚಿವಾಲಯ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಪ್ರತಿನಿಧಿಗಳು ಒಳಗೊಂಡಿದ್ದಾರೆ.

ನಗರ ಪ್ರದೇಶಗಳಲ್ಲಿ ನಗರಪಾಲಿಕೆಗಳು ಶಿಶುವಿಹಾರಗಳನ್ನು ಸ್ಥಾಪಿಸುವ ಹೊಣೆಗಾರಿಕೆಯನ್ನು ಹೊತ್ತುಕೊಂಡಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಪಂಚಾಯತ್ ಮತ್ತು ಗ್ರಾಮಸಭಾಗಳ ಅಡಿಯಲ್ಲಿ ಬರುತ್ತವೆ. ಖಾಸಗಿ ಕಂಪೆನಿಗಳು ಕೂಡ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯಡಿ ಶಿಶುವಿಹಾರಗಳನ್ನು ಸ್ಥಾಪಿಸುವ ಸಾಧ್ಯತೆಯನ್ನು ಇಲಾಖೆ ಅನ್ವೇಷಿಸುತ್ತಿದೆ.

SCROLL FOR NEXT