ನವದೆಹಲಿ: ಫೆ.23 ರಿಂದ ಪ್ರಾರಂಭವಾಗಲಿರುವ ಬಜೆಟ್ ಅಧಿವೇಶನದಲ್ಲಿ ಜೆಎನ್ ಯು ಸೇರಿದಂತೆ ರಾಷ್ಟ್ರಾದ್ಯಂತ ಇರುವ ವಿಶ್ವವಿದ್ಯಾನಿಲಯಗಳ ಸ್ಥಿತಿ-ಗತಿಗಳ ಬಗ್ಗೆ ಚರ್ಚೆಗೆ ಪ್ರತಿಪಕ್ಷಗಳು ಒತ್ತಾಯಿಸಿದ್ದು, ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದೆ.
ಬಜೆಟ್ ಅಧಿವೇಶನ ಪ್ರಾರಂಭವಾಗಲಿರುವ ಹಿನ್ನೆಲೆಯಲ್ಲಿ ಫೆ.20 ರಂದು ರಾಜ್ಯಸಭಾಧ್ಯಕ್ಷ ಹಮೀದ್ ಅನ್ಸಾರಿ ಸರ್ವಪಕ್ಷಗಳ ರಾಜ್ಯಸಭೆಯ ನಾಯಕರ ಸಭೆ ನಡೆಸಿದರು. ಸಭೆಯಲ್ಲಿ ಎಲ್ಲಾ ಪಕ್ಷಗಳು ಸುಗಮ ಬಜೆಟ್ ಅಧಿವೇಶನಕ್ಕೆ ಒಮ್ಮತ ಸೂಚಿಸಿದರು, ಅಲ್ಲದೇ ರಾಜ್ಯಸಭೆಯಲ್ಲಿ ಬಾಕಿ ಇರುವ ಪ್ರಮುಖ ಮಸೂದೆಗಳ ಅಂಗೀಕಾರಕ್ಕೆ ಬೆಂಬಲ ಸೂಚಿಸಿವೆ.
"ವಿರೋಧ ಪಕ್ಷದ ಸದಸ್ಯರು ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ನೆಹರು ವಿಶ್ವವಿದ್ಯಾನಿಲಯದ ವಿವಾದ, ರೈತರ ಆತ್ಮಹತ್ಯೆ ಪ್ರಕರಣಗಳು ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.
ಬಜೆಟ್ ಅಧಿವೇಶನದಲ್ಲಿ ಸುಗಮ ಸಂಸತ್ ಕಲಾಪ ನಡೆಯುವುದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ನಖ್ವಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ವಿತ್ತ ಸಚಿವ ಅರುಣ್ ಜೇಟ್ಲಿ, ರಾಜ್ಯಸಭೆ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಜಾದ್, ರಾಜ್ಯಸಭೆಯ ಉಪಾಧ್ಯಕ್ಷ ಪಿಜೆ ಕುರಿಯನ್ ಸಭೆಯಲ್ಲಿ ಭಾಗವಹಿಸಿದ್ದರು.