ರಾಯ್ ಪುರ್: ಬಜೆಟ್ ಅಧಿವೇಶನದಲ್ಲಿ ಜೆಎನ್ ಯು ವಿವಾದದ ಬಗ್ಗೆ ಚರ್ಚೆ ನಡೆಸಲು ಕೇಂದ್ರ ಸರ್ಕಾರ ಸಿದ್ಧ ಎಂದು ಕೇಂದ್ರ ಸಚಿವ ಎಂ ವೆಂಕಯ್ಯನಾಯ್ಡು ಹೇಳಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಳೆದ ಎರಡು ಅಧಿವೇಶನಗಳಲ್ಲಿ ಅಡೆತಡೆಗಳು ಎದುರಾದ ಹಿನ್ನಲೆಯಲ್ಲಿ ಕೆಲವು ಕಾಯ್ದೆಗಳು ಸಂಸತ್ತಿನಲ್ಲಿ ಮಂಡಿಸಲಾಗಿಲ್ಲ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಅವರು ವಿರೋಧ ಪಕ್ಷದ ನಾಯಕರ ಜೊತೆ ಸಭೆ ನಡೆಸಿದ್ದಾರೆ. ಸಂಸತ್ತಿನಲ್ಲಿ ಯಾವುದೇ ಗದ್ದಲ ಇಲ್ಲದೇ, ಸುಗಮವಾಗಿ ಸಾಗಲು ಸಹಕಾರ ನೀಡಬೇಕು ಎಂದು ಕೋರಿಕೊಂಡಿದ್ದಾರೆ. ಅಲ್ಲದೇ, ಜೆಎಸ್ ಟಿ ಕಾಯ್ದೆ ಬಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ನಾಯ್ಡು ತಿಳಿಸಿದ್ದಾರೆ.
ಬಜೆಟ್ ಅಧಿವೇಶನದಲ್ಲಿ ಆದಷ್ಟು ಪ್ರಮುಖವಾದ ಎಲ್ಲಾ ಕಾಯ್ದೆಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಪ್ರಯತ್ನಿಸಲಿದೆ ಎಂದಿದ್ದಾರೆ. ಫೆಬ್ರವರಿ 23ರಿಂದ ಬಜೆಟ್ ಅಧಿವೇಶನ ಪ್ರಾರಂಭಗೊಳ್ಳಲಿದೆ.
ಕೆಲವು ನಾಯಕರು ಜೆಎನ್ ಯು ವಿವಾದದ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಬೇಕು ಎಂದು ಒತ್ತಡ ಹೇರುತ್ತಿದ್ದು, ಬಿಜೆಪಿ ಸಂಸದರೂ ಕೂಡ ಇದಕ್ಕೆ ಒತ್ತಾಯಿಸಿದ್ದಾರೆ. ಈ ಹಿನ್ನಲೆಯಲ್ಲಿ ಬಜೆಟ್ ಅಧಿವೇಶನದಲ್ಲಿ ಜೆಎನ್ ಯು ಕುರಿತು ಚರ್ಚೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.