ದೇಶ

ಸಹಜ ಸ್ಥಿತಿಗೆ ಮರಳುತ್ತಿರುವ ಹರ್ಯಾಣ; ಪ್ರತಿಭಟನೆ ಹಿಂತೆಗೆದುಕೊಂಡ ಜಾಟ್ ಸಮುದಾಯ

Sumana Upadhyaya

ಚಂಡೀಗಢ್: ಕಳೆದ ಕೆಲ ದಿನಗಳಿಂದ ಹಿಂಸಾಪೀಡಿತ ರಾಜ್ಯವಾಗಿದ್ದ ಹರ್ಯಾಣ ಇದೀಗ ಸಹಜಸ್ಥಿತಿಗೆ ಮರಳುತ್ತಿದೆ. ಸಂಚಾರ ಸ್ಥಗಿತಗೊಂಡಿದ್ದ ರಾಷ್ಟ್ರೀಯ ಹೆದ್ದಾರಿ-1ರಲ್ಲಿ ಮತ್ತೆ ಸಂಚಾರ ಆರಂಭಗೊಂಡಿದ್ದು, ಅನೇಕ ಕಡೆಗಳಲ್ಲಿ ಕರ್ಫ್ಯೂ ಸಡಿಲಗೊಳಿಸಲಾಗಿದೆ. ದೆಹಲಿಗೆ ನೀರು ಪೂರೈಸುವ ರಾಜ್ಯದ ಮುನಕ್ ಕೊಳವೆ ಮಾರ್ಗವನ್ನು ಸೇನೆ ತನ್ನ ಹತೋಟಿಗೆ ತೆಗೆದುಕೊಂಡಿದೆ. ಇನ್ನು ಕೆಲ ಹೊತ್ತಿನಲ್ಲಿ ದೆಹಲಿಗೆ ನೀರು ಪೂರೈಕೆಯಾಗಲಿದೆ.

ದೆಹಲಿ-ಅಂಬಲಾ ಮತ್ತು ದೆಹಲಿ-ಬತಿಂದಾ ರೈಲು ಮಾರ್ಗದಲ್ಲಿ ಹಳಿಗಳ ದುರಸ್ತಿ ಆಗಬೇಕಿರುವುದರಿಂ ದ ದುರಸ್ತಿಯಾದ ನಂತರ ಪರೀಕ್ಷಿಸಿದ ಮೇಲಷ್ಟೇ ಇಲ್ಲಿ ರೈಲು ಸಂಚಾರ ಪುನರಾರಂಭವಾಗಲಿದೆ. ಪ್ರತಿಭಟನಾಕಾರರು ಅನೇಕ ಕಡೆಗಳಲ್ಲಿ ರೈಲ್ವೆ ಹಳಿಗಳನ್ನು ಹಾಳುಗೆಡವಿದ್ದಾರೆ.

ಜಾಟ್ ಸಮುದಾಯಕ್ಕೆ ಶಿಕ್ಷಣ ಹಾಗೂ ಉದ್ಯೋಗ ವಲಯದಲ್ಲಿ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಕಳೆದ ವಾರದಿಂದ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ 11 ಮಂದಿ ಸಾವನ್ನಪ್ಪಿ 150 ಮಂದಿ ಗಾಯಗೊಂಡಿದ್ದರು.

ಜಾಟ್ ಸಮುದಾಯಕ್ಕೆ ಮೀಸಲಾತಿ ನೀಡುವುದಾಗಿ ಭರವಸೆ ನೀಡಿರುವ ಹರ್ಯಾಣ ಸರ್ಕಾರ ಈ ಸಂಬಂಧ ಮುಂದಿನ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸುವುದಾಗಿ ಹೇಳಿದೆ. ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವಂತೆ ಜಾಟ್ ನಾಯಕರಲ್ಲಿ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ. ಅವರು ಇಂದು ಅಪರಾಹ್ನ ಚಂಡೀಗಢದಲ್ಲಿ ಸಚಿವ ಸಂಪುಟ ಸಭೆ ಕರೆದಿದ್ದು, ಅಲ್ಲಿ ಜಾಟ್ ಸಮುದಾಯದ ಮೀಸಲಾತಿ ಮತ್ತು ರಾಜ್ಯದ ಸ್ಥಿತಿಗತಿ ಬಗ್ಗೆ ಚರ್ಚಿಸಲಿದ್ದಾರೆ.

ಇಂದು ಬೆಳಗ್ಗೆ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದ್ದು, ಪ್ರತಿಭಟನಾಕಾರರು ನಿಧಾನವಾಗಿ ಮನೆಗೆ ಮರಳುತ್ತಿದ್ದಾರೆ. ಕಳೆದ 12 ಗಂಟೆಗಳಲ್ಲಿ ಕೆಲವು ಕಡೆ ರಸ್ತೆ ತಡೆ ಬಿಟ್ಟರೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ.

SCROLL FOR NEXT