ನವದೆಹಲಿ: ಕಳೆದ ತಿಂಗಳು ಆತ್ಮಹತ್ಯೆಗೆ ಶರಣಾದ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿ ದೆಹಲಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ವಿದ್ಯಾರ್ಥಿಗಳ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಬೆಂಬಲ ನೀಡಿದ್ದಾರೆ.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ರೋಹಿತ್ ಸಾವಿಗೆ ಕೇಂದ್ರ ಸಚಿವರೇ ಕಾರಣ ಮತ್ತು ಆತ್ಮಹತ್ಯೆಗೆ ಒತ್ತಡ ಹೇರಿದ್ದರು ಎಂದು ಆರೋಪಿಸಿದ್ದಾರೆ. ಅಲ್ಲದೆ ಈ ಸಂಬಂಧ ಸಚಿವರ ವಿರುದ್ಧ ಕೇಸ್ ದಾಖಲಿಸಿದ್ದರೂ, ಇದುವರೆಗೂ ಯಾವುದೇ ಸಚಿವರನ್ನು ವಿಚಾರಣೆಗೆ ಒಳಪಡಿಸಿಲ್ಲ ಮತ್ತು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದಿದ್ದಾರ.
ವಿದ್ಯಾರ್ಥಿಗಳಿಗೆ ಪ್ರತಿಭಟನೆ ಮಾಡುವ ಹಾಗೂ ಮಾತನಾಡುವ ಹಕ್ಕು ಇದೆ. ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಹಾಗೂ ಪ್ರಶ್ನಿಸುವ ಹಕ್ಕು ಇದೆ. ಅದಕ್ಕೆ ಉತ್ತರ ನೀಡಲೇಬೇಕು ಎಂದು ದೆಹಲಿ ಸಿಎಂ ಹೇಳಿದರು.
ರೋಹಿತ್ ಪ್ರಕರಣದಲ್ಲಿ ಇಬ್ಬರು ಕೇಂದ್ರ ಸಚಿವರು ನಿರಂತರವಾಗಿ ಮಧ್ಯಪ್ರವೇಶಿಸಿದ್ದರು. ಇದಾದ ಬಳಿಕ ಆತನನ್ನು ಅಮಾನತುಗೊಳಿಸಲಾಗಿತ್ತು ಎಂದು ಕೇಜ್ರಿವಾಲ್ ತಿಳಿಸಿದರು.