ನವದೆಹಲಿ: ನೇಪಾಳ- ಭಾರತದ ಸಂಬಂಧ ಉತ್ತಮಗೊಳ್ಳುವುದನ್ನು ಸಹಿಸದ ಕೆಲವರು ಭಾರತ ನೇಪಾಳದ ಮೇಲೆ ಪ್ರಾಬಲ್ಯ ಮೆರೆಯುತ್ತಿದ್ದು ದೊಡ್ಡಣ್ಣನ ರೀತಿಯಲ್ಲಿ ಎಂದು ಹೇಳುತ್ತಿದ್ದಾರೆ. ಆದರೆ ನೇಪಾಳಕ್ಕೆ ಭಾರತ ಹಿರಿಯಣ್ಣನ ಸ್ಥಾನದಲ್ಲಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ವಿಶ್ವ ವ್ಯವಹಾರಗಳ ಭಾರತೀಯ ಮಂಡಳಿ( ವರ್ಲ್ಡ್ ಅಫೇರ್ಸ್ ಆಫ್ ಇಂಡಿಯನ್ ಕೌನ್ಸಿಲ್) ನಲ್ಲಿ ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ಅವರೊಂದಿಗೆ ಭಾಗವಹಿಸಿ ಮಾತನಾಡಿದ ಸುಷ್ಮಾ ಸ್ವರಾಜ್, ಸ್ವಪ್ರತಿಷ್ಠೆ, ಅಹಂಕಾರದಿಂದ ವರ್ತಿಸುವುದು 'ದೊಡ್ಡಣ್ಣನ ಸ್ವಭಾವವಾಗಿರುತ್ತದೆ, ಆದರೆ ಹಿರಿಯಣ್ಣ ಎಂದಿಗೂ ಕಾಳಜಿ ತೋರಿಸುತ್ತಾನೆ, ಭಾರತ ನೇಪಾಳಕ್ಕೆ ಹಿರಿಯಣ್ಣನ ಸ್ಥಾನದಲ್ಲಿದೆಯೇ ಹೊರತು ದೊಡ್ಡಣ್ಣನಂತೆ ವರ್ತಿಸುವುದಿಲ್ಲ ಎಂದಿದ್ದಾರೆ.
'ಬಿಗ್ ಬ್ರದರ್'( ದೊಡ್ಡಣ್ಣ)ನ ಸ್ವಭಾವದ ಪರಿಕಲ್ಪನೆ ಪಾಶ್ಚಾತ್ಯರದ್ದೇ ಹೊರತು ಇಲ್ಲಿನದ್ದಲ್ಲ, ದೊಡ್ಡಣ್ಣ ಹಿರಿಯಣ್ಣ ಎರಡೂ ಪದಗಳಿಗೆ ಒಂದೇ ಅರ್ಥವಿದ್ದರೂ ಭಾರತದಲ್ಲಿ ಹಿರಿಯಣ್ಣ ಎಂದಿಗೂ ಕಾಳಜಿ ತೋರುತ್ತಾನೆ, ಅದ್ದರಿಂದ ನಾವು ಎರಡನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುತ್ತೇವೆ. ನೇಪಾಳದ ಸಮಸ್ಯೆಗಳನ್ನು ಬಗೆಹರಿಸಲು ಭಾರತ ಹಿರಿಯಣ್ಣನ ರೀತಿಯಲ್ಲಿ ಸಹಾಯ ಮಾಡಲಿದೆ ಎಂದು ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
ನೇಪಾಳದಲ್ಲಿ ಹೊಸ ಸಂವಿಧಾನವನ್ನು ಪ್ರಚಾರ ಮಾಡುತ್ತಿರುವುದು ಹಾಗೂ ಕೆಪಿ ಶರ್ಮಾ ಒಲಿ ಅವರ ನಾಯಕತ್ವಕ್ಕೆ ಸುಷ್ಮಾ ಸ್ವರಾಜ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೇಪಾಳ ಪ್ರಧಾನಿ ಕೆಪಿ ಒಲಿ, ನೇಪಾಳ ಭಾರತದ ವಿರುದ್ಧ ಚೀನಾ, ಚೀನಾದ ವಿರುದ್ಧ ಭಾರತವನ್ನು ಮುಂದಿಟ್ಟುಕೊಂಡು ನಡೆಯುತ್ತಿದೆ ಎಂಬುದನ್ನು ತಳ್ಳಿಹಾಕಿದ ಕೆಪಿ ಶರ್ಮಾ ಒಲಿ, ನೇಪಾಳದ ನೆಲದಲ್ಲಿ ಭಾರತ ವಿರೋಧಿ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.