ದೇಶ

ಜೈಲಿನಲ್ಲೂ ಕನ್ಹಯ್ಯಗೆ ಥಳಿಸಲು ವಕೀಲರ ಯೋಜನೆ: ರಹಸ್ಯ ಕಾರ್ಯಾಚರಣೆಯಲ್ಲಿ ಬಯಲು

Manjula VN
ನವದೆಹಲಿ: ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿರುವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್'ಗೆ ಜೈಲಿನಲ್ಲಿಯೂ ಥಳಿಸಲು ವಕೀಲರು ಯೋಜನೆ ರೂಪಿಸಿದ್ದರು ಎಂಬ ಮಾಹಿತಿ ಖಾಸಗಿ ಸುದ್ದಿವಾಹಿನಿಯ ರಹಸ್ಯ ಕಾರ್ಯಾಚರಣೆ ವೇಳೆ ಬಯಲಾಗಿದೆ ಎಂದು ಮಂಗಳವಾರ ತಿಳಿದುಬಂದಿದೆ. 
ಕಳೆದ ವಾರವಷ್ಟೇ ಜೆಎನ್ ವಿ ವಿವಾದಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವ ವೇಳೆ ಕನ್ಹಯ್ಯ ಕುಮಾರ್ ಹಾಗೂ ಕೆಲವು ಪತ್ರಕರ್ತರ ಮೇಲೆ ಹಲ್ಲೆ ನಡೆದಿತ್ತು. ಇದೀಗ ಮತ್ತೆ ಹಲ್ಲೆ ನಡೆಸಲು ವಕೀಲರು ಯೋಜನೆ ರೂಪಿಸಿದ್ದು, ಜೈಲಿನಲ್ಲೇ ಕನ್ಹಯ್ಯ ಕುಮಾರ್ ನನ್ನು ಥಳಿಸಲು ಯೋಜನೆ ರೂಪಿಸಿದ್ದಾರೆಂದು ತಿಳಿದುಬಂದಿದೆ. 
ಆಂಗ್ಲ ಖಾಸಗಿ ಸುದ್ದಿ ವಾಹಿನಿಯೊಂದು ಈ ಬಗ್ಗೆ ರಹಸ್ಯ ಕಾರ್ಯಾಚರಣೆಯನ್ನು ನಡೆಸಿದ್ದು, ರಹಸ್ಯ ಕಾರ್ಯಾಚರಣೆ ವೇಳೆ ಮಾಹಿತಿ ಬಯಲಾಗಿದೆ. ಪ್ರಸ್ತುತ ವಾಹಿನಿ ಪ್ರಸಾರ ಮಾಡಿರುವ ವಿಡಿಯೋದಲ್ಲಿ, ಕೆಲವು ವಕೀಲರು ಮಾತನಾಡಿದ್ದು, ಕನ್ಹಯ್ಯನಿಗೆ ನ್ಯಾಯಾಲಯದ ಆವರಣದಲ್ಲಿ ಹಲ್ಲೆ ನಡೆಸುತ್ತಿದ್ದ ವೇಳೆ ನಾವು ಭಾಗಿಯಾಗಿದ್ದೆವು. ಭಾರತ್ ಮಾತಾಕಿ ಜೈ ಎಂದು ಹೇಳು ಎಂದು ಆತನಿಗೆ ಸೂಚಿಸಿದ್ದೆವು. ಈ ವೇಳೆ 3 ಗಂಟೆಗಳ ಕಾಲ ಆತನಿಗೆ ಥಳಿಸಿದ್ದೆವು. ನಾವು ಕೊಟ್ಟ ಪೆಟ್ಟಿಗೆ ಕನ್ಹಯ್ಯ ಪ್ಯಾಂಟ್ ಒದ್ದೆಯಾಗಿತ್ತು ಎಂದು ಹೇಳಿಕೊಂಡಿದ್ದಾರೆ.
ಇದರಂತೆ ಮತ್ತೊಬ್ಬ ವಕೀಲರು ಕೂಡ ರಹಸ್ಯ ಕಾರ್ಯಾಚರಣೆ ವೇಳೆ ಮಾತನಾಡಿದ್ದು, ಕನ್ಹಯ್ಯನನ್ನು ನಾವು ಬಿಡುವುದಿಲ್ಲ. ಆತನನ್ನು ಪೆಟ್ರೋಲ್ ಬಾಂಬ್ ಹಾಕಿ ಸಾಯಿಸುತ್ತೇನೆ. ನನ್ನ ವಿರುದ್ಧ ಕೊಲೆ ಪ್ರಕರಣ ದಾಖಲಾದರೂ ಸರಿಯೇ. ಆತನನ್ನು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಕನ್ಹಯ್ಯ ಜೈಲಿನಲ್ಲಿದ್ದರೆ ಆತನನ್ನು ಥಳಿಸಲು ಅವಕಾಶ ಸಿಗುತ್ತದೆ. ಹೀಗಾಗಿ ಆತನ ಜಾಮೀನಿಗೆ ಸಹಿ ಮಾಡಿರಲಿಲ್ಲ. ನ್ಯಾಯಾಲಯದ ಆವರಣದಲ್ಲಿ ಆತನ ಮೇಲೆ ಹಲ್ಲೆ ನಡೆಸಿದಾಗ ದೆಹಲಿ ಪೊಲೀಸರ ಸಂಪೂರ್ಣ ಬೆಂಬಲವಿತ್ತು ಎಂದು ಹೇಳಿಕೊಂಡಿದ್ದಾರೆ. 
ಇದರಂತೆ ರಹಸ್ಯ ಕಾರ್ಯಾಚರಣೆ ವಿಡಿಯೋ ಕುರಿತಂತೆ ಪ್ರತಿಕ್ರಿಯೆ ನೀಡಲಿ ದೆಹಲಿ ಹಿರಿಯ ಪೊಲೀಸ್ ಅಧಿಕಾರಿ ನಿರಾಕರಿಸಿದ್ದು, ತನಿಖೆ ಇಲ್ಲದೆ ಇಲ್ಲದೆ ವಿಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ವಿಡಿಯೋಗೆ ಬಂಧಿಸಿ ವಕೀಲರಾದ ವಿಕ್ರಮ್ ಸಿಂಗ್ ಚೌಹಾಣ್, ಯಶ್ಪಾಲ್ ಸಿಂಗ್ ಮತ್ತು ಓಂ ಶರ್ಮಾ ವಿರುದ್ಧ ನೋಟಿಸ್ ಜಾರಿ ಮಾಡಿದ್ದು, ವಿಡಿಯೋ ಸಂಬಂಧ ತನಿಖೆಗೊಳಪಡಬೇಕೆಂದು ಸೂಚನೆ ನೀಡಿದೆ. ನೋಟಿಸ್ ಜಾರಿಯಾಗುತ್ತಿದ್ದಂತೆ ಪೊಲೀಸರು ಆಗಮಿಸುವುದಕ್ಕೂ ಮುನ್ನವೇ ಓಂ ಶರ್ಮಾ ಅವರು ಠಾಣೆಗೆ ಹೋಗಿದ್ದಾರೆ. ಇದರಂತೆ ಓಂ ಶರ್ಮಾ ಅವರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
SCROLL FOR NEXT