ನವದೆಹಲಿ: ಯುದ್ಧ ಕಾರ್ಯಾಚರಣೆಗಳಲ್ಲಿ ಪಾಲ್ಗೊಳ್ಳಲು ಮಹಿಳೆಯರಿಗೆ ಹಂತ ಹಂತವಾಗಿ ಅವಕಾಶ ನೀಡಲಾಗುವುದು ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ.
ಸಶಸ್ತ್ರ ಪಡೆಗಳಿಗೆ ಮಹಿಳೆಯರನ್ನು ನೇಮಕ ಮಾಡುವ ಪ್ರಸ್ತಾವನೆಯನ್ನು ರಕ್ಷಣಾ ಸಚಿವರು ಈ ಹಿಂದೆ ತಿರಸ್ಕರಿಸಿದ್ದರಾದರೂ ಈಗ ಹಂತ ಹಂತವಾಗಿ ಸಶಸ್ತ್ರಪಡೆಗಳಿಗೆ ಯುದ್ಧ ಕಾರ್ಯಾಚರಣೆಗಳಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ ಎಂದಿದ್ದಾರೆ.
ಮಹಿಳೆಯರಿಗೆ ನೀಡಬೇಕಿರುವ ತರಬೇತಿ ಹಾಗೂ ಸೌಕರ್ಯಗಳನ್ನು ಒದಗಿಸುವ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಈ ವಿಷಯದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಮೊದಲೇ ಹೇಳಿದಂತೆ ಸಶಸ್ತ್ರ ಪಡೆಗಳಿಗೆ ಮಹಿಳೆಯರನ್ನು ನೇಮಕ ಮಾಡುವ ವಿಷಯ ಕಾಲಾನುಕ್ರಮದಲ್ಲಿ ನಿರ್ಧಾರವಾಗಬೇಕಿರುವ ವಿಷಯವಾಗಿದೆ. ಈ ಬಗ್ಗೆ ನಿರ್ಧಾರ ಕೈಗೊಳ್ಳುವಾಗ ಹಲವು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ ಎಂದು ಪರಿಕ್ಕರ್ ಹೇಳಿದ್ದಾರೆ.
ಯುದ್ಧ ವಿಮಾನಗಳಲ್ಲಿ ಕಾರ್ಯನಿರ್ವಹಣೆಗೆ ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯ ಯುದ್ಧ ಕಾರ್ಯಾಚರಣೆಗಲ್ಲಿ ತೊಡಗಲು ಮಹಿಳೆಯರಿಗೆ ಅವಕಾಶ ನೀಡಲಾಗುತ್ತದೆ ಎಂದು ಸಂಸತ್ ನ ಜಂಟಿ ಸದನ ಉದ್ದೇಶಿಸಿ ಮಾತನಾಡಿದ್ದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದರು.