ಪಾಟ್ನಾ: ಸ್ವಚ್ಛತೆ, ಭದ್ರತೆ ಹಾಗೂ ಸಮಯ ನಿರ್ವಹಣೆಯನ್ನು ಬಿಟ್ಟರೆ ಈ ಬಾರಿಯ ಬಜೆಟ್ ನಿರಾಶೆಯನ್ನುಂಟು ಮಾಡಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಗುರುವಾರ ಹೇಳಿದ್ದಾರೆ.
ರೈಲ್ವೇ ಸಚಿವ ಸುರೇಶ್ ಪ್ರಭು ಅವರು ಇಂದು ಮಂಡಿಸಿದ 2016-17ನೇ ಸಾಲಿನ ರೈಲ್ವೆ ಬಜೆಟ್ ಕುರಿತಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, "ಸುರೇಶ್ ಪ್ರಭು ಅವರು ನನಗೆ ವೈಯಕ್ತಿಕವಾಗಿ ಗೆಳೆಯರಾಗಿದ್ದು, ಅವರಿಗೆ ಶುಭವನ್ನು ಹಾರೈಸುತ್ತೇನೆ. ಆದರೆ, ಈ ಬಾರಿಯ ರೈಲ್ವೆ ಬಜೆಟ್ ನಲ್ಲಿ ಹೊಸದೆಂಬುದು ಯಾವುದು ಇರಲಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಇಳಿಕೆ ಕಂಡಿದ್ದು, ಇದನ್ನು ಗಮನಿಸಿದರೆ ಈ ಬಾರಿ ಪ್ರಯಾಣದ ದರ ಕಡಿಮೆಯಾಗಬೇಕಿತ್ತು. ಆದರೆ, ದರ ಕಡಿಮೆ ಮಾಡದೇ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಾಗಿದೆ".
"ಮೀಸಲು ನಿಧಿಯಲ್ಲು ಶೇ.40 ರಷ್ಟು ಆದಾಯ ಕಡಿಮೆಯಾದಂತಿದೆ. ಭದ್ರತೆ ವಿಚಾರದಲ್ಲಿ ಆಕರ್ಷಿತವಾದ ಯಾವುದೇ ಯೋಜನೆಗಳನ್ನು ಕೈಗೊಳ್ಳಲಾಗಿಲ್ಲ. ಮಾಜಿ ಪ್ರಧಾನಮಂತ್ರಿ ವಾಜಪೇಯಿ ಅವರ ಅಧಿಕಾರಾವಧಿಯಲ್ಲಿ ನಾನು ರೈಲ್ವೆ ಸಚಿವನಾಗಿದ್ದಾಗ ಭದ್ರತೆಗಾಗಿ ರು.17 ಸಾವಿರ ಕೋಟಿಯನ್ನು ಮೀಸಲಿರಿಸಲಾಗಿತ್ತು".
"ಈ ಬಾರಿಯ ರೈಲ್ವೆ ಬಜೆಟ್'ನಲ್ಲಿ ಹಿಂದುಳಿದ ಪ್ರದೇಶಗಳನ್ನು ದೂರ ಮಾಡಲಾಗಿದ್ದು, ಬಿಹಾರ ಜನತೆ ಇಂದಿನ ಬಜೆಟ್'ನ್ನು ತಿರಸ್ಕರಿಸುತ್ತದೆ. ನನ್ನ ಅವಧಿಯಲ್ಲಿ ಜನ ಕ್ರಾಂತಿ ಹೊರತರಲಾಗಿತ್ತು. ಇದೀಗ ಪ್ರಭು ಕೂಡ ಅದೇ ಯೋಜನೆಯನ್ನು ಹೊರತಂದಿದ್ದು, ಅಂತ್ಯೋದಯ ಎಕ್ಸ್ ಪ್ರೆಸ್ ಎಂದು ಹೊಸ ಹೆಸರನ್ನು ನೀಡಿದ್ದಾರೆ ಎಂದು ನಿತೀಶ್ ಹೇಳಿದರು.
ಇದೇ ವೇಳೆ ಬಿಜೆಪಿ ಸರ್ಕಾರವನ್ನು ಟೀಕಿಸಿರುವ ನಿತೀಶ್ ಕುಮಾರ್ ಅವರು, ಬಿಜೆಪಿ ಸರ್ಕಾರವು ರೈಲ್ವೆಯಲ್ಲಿ ಖಾಸಗೀಕರಣವನ್ನು ಪ್ರೋತ್ಸಾಹಿಸುವ ಸಲುವಾಗಿ ಮಾರುಕಟ್ಟೆ ಸಾಲ ಮತ್ತು ರೈಲ್ವೆ ಯೋಜನೆಗಳಲ್ಲಿ ಬಂಡವಾಳ ಹೂಡಿಕೆಗಳ ಬಗ್ಗೆ ಮಾತನಾಡುತ್ತಿದೆ ಎಂದು ಹೇಳಿದ್ದಾರೆ.