ದೇಶ

ನೇಮಕಾತಿ ಹಗರಣ: ದಿಗ್ವಿಜಯ್ ಸಿಂಗ್ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್

Srinivas Rao BV

ಭೋಪಾಲ್: ವಿಧಾನಸಭೆ ಅಧಿಕಾರಿಗಳ ನೇಮಕಾತಿ ಹಗರಣದ ಸಂಬಂಧ ಮಧ್ಯಪ್ರದೇಶದ ಸ್ಥಳೀಯ ನ್ಯಾಯಾಲಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿದೆ.  
1993 -2003 ರಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ದಿಗ್ವಿಜಯ್ ಸಿಂಗ್ ವಿರುದ್ಧ ವಿಧಾನಸಭೆ ಕಾರ್ಯದರ್ಶಿಗಳ ನೇಮಕದಲ್ಲಿ ಅವ್ಯವಹಾರ ನಡೆಸಿರುವ ಆರೋಪ ಕೇಳಿಬಂದಿತ್ತು. ಹಗರಣದ ತನಿಖೆ ನಡೆಸುತ್ತಿರುವ ಮಧ್ಯ ಪ್ರದೇಶ ಪೊಲೀಸರು ಕೋರ್ಟ್ ನ ವಿಚಾರಣೆ ವೇಳೆ ಹಾಜರಾಗಬೇಕೆಂದು  ದಿಗ್ವಿಜಯ್ ಸಿಂಗ್ ಗೆ ಸಮನ್ಸ್ ನೀಡಿದ್ದರು. ಆದರೆ ದಿಗ್ವಿಜಯ್ ಸಿಂಗ್ ವಿಚಾರಣೆಗೆ ಹಾಜರಾಗಿರಲಿಲ್ಲ. 
ದಿಗ್ವಿಜಯ್ ಸಿಂಗ್ ಅವರೊಂದಿಗೆ ಸಮನ್ಸ್ ಪಡೆದಿದ್ದ ವಿಧಾನಸಭೆ ಅಧಿಕಾರಿಗಳಾದ ಕೆ ಕೆ ಕೌಶಲ್ ಮತ್ತು ಇ ಕೆ ಪ್ಯಾಸಿ ಕೋರ್ಟ್ ಗೆ ಹಾಜರಾಗಿ ಜಾಮೀನು ಪಡೆದಿದ್ದರು. ವಿಚಾರಣೆಗೆ ಹಾಜರಾಗದ ಕಾರಣ ದಿಗ್ವಿಜಯ್ ಸಿಂಗ್ ಗೆ ಕೋರ್ಟ್ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿ ಮುಂದಿನ ವಿಚಾರಣೆಯನ್ನು ಮಾರ್ಚ್ 14 ಕ್ಕೆ ನಿಗದಿಪಡಿಸಿದೆ.  ದಿಗ್ವಿಜಯ್ ಸಿಂಗ್ ವಿರುದ್ಧ  ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ, ವಂಚನೆ, ಅಧಿಕಾರ ದುರ್ಬಳಕೆ ಪ್ರಕರಣಗಳು ದಾಖಲಾಗಿವೆ.

SCROLL FOR NEXT