ನವದೆಹಲಿ: ಪಠಾಣ್ ಕೋಟ್ ನಲ್ಲಿ ಉಗ್ರರ ದಾಳಿ ನಡೆದ ಬೆನ್ನಲ್ಲೇ ಕೇಂದ್ರ ಸರ್ಕಾರ ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ಕಾರ್ಯತಂತ್ರ ಹೆಣೆಯಲು ಮುಂದಾಗಿದೆ.
ಮಾಜಿ ವಿದೇಶಾಂಗ ಕಾರ್ಯದರ್ಶಿಗಳು, ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸಿದ್ದ ಭಾರತದ ಮಾಜಿ ರಾಯಭಾರಿಗಳೊಂದಿಗೆ ನಡೆದ ಸಭೆಯಲ್ಲಿ ಕೇಂದ್ರ ಸರ್ಕಾರ ಪಾಕಿಸ್ತಾನದ ಬಗೆಗಿನ ಕಾರ್ಯತಂತ್ರವನ್ನು ಚರ್ಚಿಸಿದೆ. ಸುಷ್ಮಾ ಸ್ವರಾಜ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾಜಿ ಅಧಿಕಾರಿಗಳಾದ ಎಸ್ ಕೆ ಲಾಂಭ್, ಜಿ ಪಾರ್ಥಸಾರಥಿ, ಶ್ಯಾಮ್ ಶರಣ್, ಶಿವಶಂಕರ್ ಮೆನನ್, ಸತ್ಯಬ್ರತ ಪಾಲ್ ಶರದ್ ಸಭರವಾಲ್ ಹಾಗೂ ಟಿಸಿಎ ರಾಘವನ್ ಭಾಗವಹಿಸಿದ್ದರು.
ಈ ಸಭೆಯ ಬಗ್ಗೆ ವಿದೇಶಾಂಗ ಸಚಿವಾಲಯ ಹೆಚ್ಚಿನ ಮಾಹಿತಿ ನೀಡಿಲ್ಲವಾದರೂ, ಪಾಕಿಸ್ತಾನಕ್ಕೆ ಸಂಬಂಧಿಸಿದ ಕಾರ್ಯತಂತ್ರಕ್ಕಾಗಿ ರಾಜತಾಂತ್ರಿಕ ಸಮಾಲೋಚನೆ ಎಂದಷ್ಟೇ ತಿಳಿಸಿದೆ. ಭಾರತ- ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿಗಳ ನಡುವಿನ ದ್ವಿಪಕ್ಷೀಯ ಮಾತುಕತೆಗೂ ಮುನ್ನ ಪಠಾಣ್ ಕೋಟ್ ನಲ್ಲಿ ನಡೆದಿರುವ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ಕಾರ್ಯತಂತ್ರ ರೂಪಿಸಲು ಮುಂದಾಗಿದೆ.