ದೇಶ

ವಿಶ್ವವನ್ನು ಒಗ್ಗೂಡಿಸುವುದನ್ನು ಬಿಡಿ, ಭಾರತದ ಬಗ್ಗೆ ಹೆಚ್ಚಿನ ಗಮನ ಕೊಡಿ: ಮೋದಿಗೆ ಶಿವಸೇನೆ

Srinivas Rao BV

ಮುಂಬೈ: ಪಠಾಣ್ ಕೋಟ್ ನಲ್ಲಿ ಉಗ್ರರ ದಾಳಿ ನಡೆದಿರುವ ಬಗ್ಗೆ ಕೇಂದ್ರ ಸರ್ಕಾರವನ್ನು ಶಿವಸೇನೆ ತರಾಟೆಗೆ ತೆಗೆದುಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ವಿಶ್ವವನ್ನು ಒಗ್ಗೂಡಿಸುವುದಕ್ಕಿಂತ ಭಾರತದತ್ತ ಹೆಚ್ಚು ಗಮನ ಕೇಂದ್ರೀಕರಿಸಲಿ ಎಂದು ಹೇಳಿದೆ.
ಮೋದಿ ಪಾಕಿಸ್ತಾನವನ್ನು ನಂಬಬಾರದು ಎಂದು ಸಲಹೆ ನೀಡಿರುವ ಶಿವಸೇನೆ, ಪಠಾಣ್ ಕೋಟ್ ನಲ್ಲಿ ನಡೆದಿರುವ ಭಯೋತ್ಪಾದಕ ದಾಳಿ ನಮ್ಮ ಗಡಿ ಪ್ರದೇಶಗಳು ಸುರಕ್ಷಿತವಾಗಿಲ್ಲ ಎಂಬುದನ್ನು ಮತ್ತೆ ನಿರೂಪಿಸಿದ್ದು ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸುವ ಕೆಲಸ ಮಾತ್ರ ನಡೆಯುತ್ತಿದೆ ಎಂದು ಮುಖವಾಣಿ ಸಾಮ್ನಾದಲ್ಲಿ ಶಿವಸೇನೆ ಹೇಳಿದೆ.
ನವಾಜ್ ಷರೀಫ್ ಅವರೊಂದಿಗೆ ಟೀ ಕುಡಿದಿದ್ದಕ್ಕೆ ಪ್ರತಿಯಾಗಿ ನಮ್ಮ ದೇಶದ 7 ಜನ ಸೈನಿಕರು ಮೃತಪಟ್ಟಿದ್ದಾರೆ. 6 ಜನ ಭಯೋತ್ಪಾದಕರ ಮೂಲಕ ಪಾಕಿಸ್ತಾನ ಭಾರತದ ಸ್ವಾಭಿಮಾನವನ್ನೇ ಮುಗಿಸಲು ಯತ್ನಿಸಿದೆ. ಈ ಘಟನೆ ನಮ್ಮ ದೇಶದ ಆಂತರಿಕ ಭದ್ರತೆ ಸದೃಢವಾಗಿಲ್ಲ ಎಂಬುದನ್ನು ಸಾಬೀತುಪಡಿಸುವಂತಿದೆ ಎಂದು ಶಿವಸೇನೆ ಕಿಡಿಕಾರಿದೆ.

ಕಳೆದ ವಾರ ಪ್ರಧಾನಿ ಮೋದಿ ಪಾಕಿಸ್ತಾನಕ್ಕೆ ಭೇಟಿ ನೀಡಿದಾಗಲೇ ಪಾಕಿಸ್ತಾನವನ್ನು ನಂಬಂದಂತೆ ಎಚ್ಚರಿಸಿದ್ದೆವು, ಇಂದು ಯಾವ ರೀತಿಯಲ್ಲಿ ಪಾಕಿಸ್ತಾನ ಬೆನ್ನಿಗೆ ಚೂರಿ ಹಾಕಿದೆ ಎಂಬುದಕ್ಕೆ ಸಾಕ್ಷಿ ಕಣ್ಣೆದುರಿಗಿದೆ. ಪಾಕಿಸ್ತಾನ ನಿಜವಾಗಿಯೂ ಭಾರತದೊಂದಿಗಿನ ತನ್ನ ಸಂಬಂಧವನ್ನು ಉತ್ತಮಗೊಳಿಸಿಕೊಳ್ಳಬೇಕೆಂದರೆ ಪಠಾಣ್ ಕೋಟ್ ನಲ್ಲಿ ದಾಳಿ ನಡೆಸಿರುವ ಜೈಶ್-ಇ- ಮೊಹಮ್ಮದ್ ನ ಮೌಲಾನಾ ಮಸೂದ್ ಅಜರ್ ನ್ನು ಭಾರತಕ್ಕೆ ಹಸ್ತಾಂತರಿಸಲಿ ಎಂದು ಶಿವಸೇನೆ ಹೇಳಿದೆ.  
ಒಂದು ವೇಳೆ ಕಾಂಗ್ರೆಸ್ ಅಧಿಕಾರದಲ್ಲಿದ್ದರೆ, ಪಾಕಿಸ್ತಾನದ ಮೇಲೆ ದಾಳಿ ನಡೆಸಲು, ಹುತಾತ್ಮ ಯೋಧರ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಒತ್ತಾಯ ಕೇಳಿಬರುತ್ತಿತ್ತು. ಆದರೆ ಈಗ ಅಂತಹ ಒತ್ತಾಯಗಳು ಕೇಳಿಬರುತ್ತಿಲ್ಲ, ಪ್ರಧಾನಿ ನರೇಂದ್ರ ಮೋದಿ ಇಡಿ ವಿಶ್ವವವನ್ನೇ ಒಗ್ಗೂಡಿಸಲು ಯತ್ನಿಸುತ್ತಿದ್ದಾರೆ. ಆದರೆ ಭಾರತದ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸಬೇಕಿದೆ ಎಂದು ಶಿವಸೇನೆ ಮೋದಿಗೆ ಸಲಹೆ ನೀಡಿದೆ.

SCROLL FOR NEXT