ವಾಷಿಂಗ್ ಟನ್: ಯುಪಿ ಪ್ರವಾಸಿ ದಿವಸ್ ಅಂಗವಾಗಿ ಕೊಡಲಾಗುವ ಉತ್ತರ ಪ್ರದೇಶ ರತ್ನ ಪ್ರಶಸ್ತಿಯನ್ನು ಈ ಬಾರಿ ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಸಂಜಾತ ಉದ್ಯಮಿ ಫ್ರಾಂಕ್ ಇಸ್ಲಾಂ ಗೆ ನೀಡಲಾಗಿದೆ.
ಆಜಂಘರ್ ನಲ್ಲಿ ಜನಿಸಿದ ಫ್ರಾಂಕ್ ಇಸ್ಲಾಂ 1970 ರಲ್ಲಿ ಅಮೆರಿಕಗೆ ತೆರಳಿ ಕೊಲರಾಡೊ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಿ, ಉದ್ಯಮಿಯಾಗಿದ್ದಾರೆ. ಯುಪಿ ಪ್ರವಾಸಿ ದಿವಸ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ರತ್ನ ಪ್ರಶಸ್ತಿಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಪ್ರದಾನ ಮಾಡಿದ್ದರು.
ಫ್ರಾಂಕ್ ಇಸ್ಲಾಂ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದ್ದ ಅವರ ಭಾರತೀಯ ಸ್ನೇಹಿತ ಡಾ. ಫಜಲ್ ಖಾನ್ ಫ್ರಾಂಕ್ ಇಸ್ಲಾಂ ಗೆ ಪ್ರಶಸ್ತಿಯನ್ನು ತಲುಪಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಫ್ರಾಂಕ್ ಇಸ್ಲಾಂ, ಉತ್ತರ ಪ್ರದೇಶ ರತ್ನ ಪ್ರಶಸ್ತಿ ಸ್ವೀಕರಿಸುವುತ್ತಿರುವುದು ಅಂತ್ಯಂತ ಸಂತಸದ ಸಂಗತಿ ಎಂದು ಹೇಳಿದ್ದಾರೆ.
ಯುಪಿ ಪ್ರವಾಸಿ ದಿವಸ್ ಮೂಲಕ ಅನಿವಾಸಿ ಭಾರತೀಯರನ್ನು ಒಗ್ಗೂಡಿಸುತ್ತಿರುವ ಉತ್ತರ ಪ್ರದೇಶ ಸರ್ಕಾರದ ಕೆಲಸ ಶ್ಲಾಘನೀಯ ಎಂದು ಫ್ರಾಂಕ್ ಇಸ್ಲಾಂ ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ಮಹಿಳೆಯರಿಗೆ ತಾಂತ್ರಿಕ ತರಬೇತಿ ಶಾಲೆಯನ್ನು ಪ್ರಾರಂಭಿಸಲು ಆರ್ಥಿಕ ನೆರವು ನೀಡುವುದಾಗಿ ಫ್ರಾಂಕ್ ಇಸ್ಲಾಂ ಹೇಳಿದ್ದಾರೆ.