ಪಾಟ್ನಾ: ಕಾಂಗ್ರೆಸ್ ನ್ನು ಮಿತ್ರಪಕ್ಷವಾಗಿರಿಸಿಕೊಂದು ಬಿಹಾರದಲ್ಲಿ ಸರ್ಕಾರ ನಡೆಸುತ್ತಿರುವ ಜೆಡಿಯು, ಕಾಂಗ್ರೆಸ್ ನಾಯಕಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಬಗ್ಗೆ ಟಿಕಾ ಪ್ರಹಾರ ನಡೆಸಿದೆ. ಇಂದಿರಾ ಗಾಂಧಿ ಅವರ ದಲಿತ ಬ್ರಿಟೀಶ್ ಆಡಳಿತಕ್ಕಿಂತ ಕೆಟ್ಟದಾಗಿತ್ತು ಎಂದು ಸರ್ಕಾರಿ ವೆಬ್ ಸೈಟ್ ನಲ್ಲಿ ಪ್ರಕಟವಾಗಿರುವುದು ಕಾಂಗ್ರೆಸ್ ಪಕ್ಷದ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ.
ಇದು ಕೇವಲ ತಪ್ಪಲ್ಲ ಖಂಡನೀಯವಾದ ವಿಷಯ, ಇಂದಿರಾ ಗಾಂಧಿ ಅವರ ಆಡಳಿತವನ್ನು ಟೀಕಿಸಿರುವುದರ ಬಗ್ಗೆ ಬಿಹಾರ ಸರ್ಕಾರದೊಂದಿಗೆ ಮಾತನಾಡುತ್ತೇವೆ ಎಂದು ಕಾಂಗ್ರೆಸ್ ವಕ್ತಾರ ಸರ್ಬತ್ ಜಹಾನ್ ಫಾತಿಮಾ ಹೇಳಿದ್ದಾರೆ. ಇಂದಿರಾ ಗಾಂಧಿ ಅವರ ಆಡಳಿತವನ್ನು ಬ್ರಿಟೀಶ್ ಆಡಳಿತಕ್ಕಿಂತ ಕೆಟ್ಟದಾಗಿತ್ತು ಎಂದು ಹೇಳಿರುವುದನ್ನು ಕಾಂಗ್ರಸ್ ಪಕ್ಷ ಗಂಭೀರವಾಗಿ ಪರಿಗಣಿಸಲಿದೆ ಎಂದು ಬಿಹಾರ ಶಿಕ್ಷಣ ಸಚಿವ ಕಾಂಗ್ರೆಸ್ ಮುಖಂಡ ಅಶೋಕ್ ಚೌಧರಿ ಹೇಳಿದ್ದಾರೆ.
ಜಯಪ್ರಕಾಶ್ ನಾರಾಯಣ್ ಅವರು ಇಂದಿರಾ ಗಾಂಧಿ ಹಾಗೂ ಆಕೆಯ ಪುತ್ರ ಸಂಜಯ್ ಗಾಂಧಿ ಅವರ ನಿರಂಕುಶ ಆಡಳಿತವನ್ನು ದೃಢವಾಗಿ ವಿರೋಧಿಸಿದ್ದರು. ಜಯಪ್ರಕಾಶ್ ನಾರಾಯಣ್ ಅವರಿಗೆ ದೊರೆತ ಜನಬೆಂಬಲದಿಂದ ಆತಂಕಗೊಂಡ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರುವುದಕ್ಕೂ ಮುನ್ನ ಜಯಪ್ರಕಾಶ್ ನಾರಾಯಣ್ ಅವರನ್ನು ಜೈಲಿಗೆ ತಳ್ಳಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ನೆಹರು ಅವರೊಂದಿಗೆ ಹೋರಾಡಿದ್ದ 70 ವರ್ಷದ ಜಯಪ್ರಕಾಶ್ ನಾರಾಯಣ್ ಅವರನ್ನು ಇಂದಿರಾ ಗಾಂಧಿ ಜೈಲಿಗೆ ಕಳಿಸಿ ಬ್ರಿಟೀಶರಿಗಿಂತ ಕ್ರೂರವಾಗಿ ನಡೆದುಕೊಂಡಿದ್ದರು ಎಂದು ಬಿಹಾರ ಸರ್ಕಾರ ತನ್ನ ವೆಬ್ ಸೈಟ್ ನಲ್ಲಿ ಬರೆದಿರುವುದೇ ಕಾಂಗ್ರೆಸ್ ನ ಆಕ್ರೋಶಕ್ಕೆ ಕಾರಣವಾಗಿದೆ.