ದೇಶ

ಪಾಕ್ ಗೆ ಮೋದಿ ತೆರಳಿದ ಬೆನ್ನಲ್ಲೇ ನವಾಜ್ ಷರೀಫ್ ಭೇಟಿ ಮಾಡಿದ್ದ ದಾವೂದ್ ಇಬ್ರಾಹಿಂ

Sumana Upadhyaya

ನವದೆಹಲಿ: ಉಗ್ರಗಾಮಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪಠಾಣ್ ಕೋಟ್ ವಾಯುನೆಲೆ ಮೇಲೆ ನಡೆದ ದಾಳಿ ನಂತರ ಪಾಕಿಸ್ತಾನ ಭಾರತಕ್ಕೆ ಭರವಸೆ ನೀಡಿದೆಯಾದರೂ ಪಾಕಿಸ್ತಾನದ ಇನ್ನೊಂದು ಮುಖ ಬದಲಾದಂತಿದೆ. ಮಾಧ್ಯಮಗಳಿಗೆ ಸಿಕ್ಕಿದ ವರದಿಯನ್ನು ನಂಬುವುದಾದರೆ ಪಾಕಿಸ್ತಾನದ ನಿಜವಾದ ಉದ್ದೇಶವೇನು ಎಂಬುದು ಗೊತ್ತಾಗುತ್ತದೆ.

 ಐಬಿಎನ್ 7 ಹಿಂದಿ ನ್ಯೂಸ್ ಚಾನೆಲ್ ಗೆ ಸಿಕ್ಕಿದ ಮಾಹಿತಿ ಪ್ರಕಾರ, ಭಾರತ ಸೆರೆಹಿಡಿಯಬೇಕಾಗಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ, ಪ್ರಧಾನಿ ನರೇಂದ್ರ ಮೋದಿಯವರು ಲಾಹೋರ್ ಗೆ ಅನಿರೀಕ್ಷಿತವಾಗಿ ಭೇಟಿ ನೀಡಿದ ಒಂದು ದಿನ ನಂತರ ನವಾಜ್ ಷರೀಫ್ ನನ್ನು ಭೇಟಿ ಮಾಡಿ ಆತಿಥ್ಯ ಸ್ವೀಕರಿಸಿದ್ದನಂತೆ. ನವಾಜ್ ಷರೀಫ್ ಅವರ ಹುಟ್ಟುಹಬ್ಬ ಮತ್ತು ಅವರ ಮೊಮ್ಮಗಳ ಮದುವೆ ದಿನ ಪ್ರಧಾನಿ ಮೋದಿಯವರು ಲಾಹೋರ್ ಗೆ ತೆರಳಿ ಷರೀಫ್ ಅವರನ್ನು ಭೇಟಿ ಮಾಡಿದ್ದರು.

ನರೇಂದ್ರ ಮೋದಿ ಅವರು ಡಿಸೆಂಬರ್ 25ರಂದು ಲಾಹೋರ್ ನಲ್ಲಿ ನವಾಜ್ ಷರೀಫ್ ಅವರನ್ನು ಭೇಟಿ ಮಾಡಿ ನೂತನ ವಧುವರರನ್ನು ಹರಸಿ, ಅವರಿಗೆ ಉಡುಗೊರೆ ನೀಡಿ ಭಾರತಕ್ಕೆ ಹಿಂತಿರುಗಿದ್ದರು. ನವಾಜ್ ಷರೀಫ್ ಅವರ ಅತಿಥಿಗಳ ಪಟ್ಟಿಯಲ್ಲಿ ಯಾರ್ಯಾರು ಇದ್ದಾರೆ ಎಂಬುದು ಅವರಿಗೆ ತಿಳಿದಿರಲಿಲ್ಲ.

ಮುಂಬೈ ಮೂಲದ ಹಿರಿಯ ಪತ್ರಕರ್ತ ಬಲ್ಜೀತ್ ಪರ್ಮರ್ ಅವರ ವರದಿಯನ್ನು ನಂಬುವುದಾದರೆ ಡಿಸೆಂಬರ್ 26ರಂದು ದಾವೂದ್ ಇಬ್ರಾಹಿಂ ಮತ್ತು ಅವನ ಇಡೀ ಕುಟುಂಬ ಲಾಹೋರ್ ನ ರೈವಿಂಡಿ ಅರಮನೆಯಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.ದಾವೂದ್ ಇಬ್ರಾಹಿಂ ಜೊತೆಗೆ ಭಾರತದ ಪ್ರಮುಖ ವಾಣಿಜ್ಯೋದ್ಯಮಿಯೊಬ್ಬರು ಮತ್ತು ಮುಂಬೈಯ ಕೆಲವು ಸ್ನೇಹಿತರು ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಮದುವೆ ನಡೆಯುವುದಕ್ಕೆ ಕೆಲ ದಿನಗಳ ಮುನ್ನ ದಾವೂದ್ ಇಬ್ರಾಹಿಂ ತನ್ನ ಪ್ರಮುಖ ಸಹಚರ ಛೋಟಾ ಶಕೀಲ್ ಗೆ ಮಾಡಿದ ದೂರವಾಣಿ ಕರೆಗಳನ್ನು ಭಾರತೀಯ ಗುಪ್ತಚರ ಸಂಸ್ಥೆ ತಡೆಹಿಡಿದಿದೆ. ಈ ಸಂದರ್ಭದಲ್ಲಿ ದಾವೂದ್ ಛೋಟಾ ಶಕೀಲನೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತಾ ಸದ್ಯದಲ್ಲಿಯೇ ಒಂದು ಪ್ರಮುಖ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಹೇಳಿಕೊಂಡಿದ್ದ.ಡಿಸೆಂಬರ್ 26ಕ್ಕೆ ದಾವೂದ್ ಇಬ್ರಾಹಿಂ ಮದುವೆ ವಾರ್ಷಿಕೋತ್ಸವ ಆಗಿರುವುದರಿಂದ ಆ ಕಾರ್ಯಕ್ರಮದ ಬಗ್ಗೆ ದಾವೂದ್ ಪ್ರಸ್ತಾಪಿಸುತ್ತಿದ್ದಾನೆ ಎಂದೇ ಭಾವಿಸಲಾಗಿತ್ತು.

SCROLL FOR NEXT