ನವದೆಹಲಿ: ಅಮಿತ್ ಶಾ ಅವರು ಬಿಜೆಪಿ ರಾಷ್ಟ್ರಾಧ್ಯಕ್ಷರನ್ನಾಗಿ ನೇಮಿಸಲು ಮರು ಚುನಾವಣೆ ನಡೆದ ಬಳಿಕ ಕೇಂದ್ರ ಸರ್ಕಾರದಲ್ಲಿ ಮತ್ತು ಬಿಜೆಪಿ ಪಕ್ಷದಲ್ಲಿ ಹಲವು ಮಹತ್ತರ ಬದಲಾವಣೆಗಳು ಆಗಲಿವೆ. ಅವುಗಳಲ್ಲಿ ಸಂಪುಟ ಪುನಾರ್ರಚನೆ ಮುಖ್ಯವಾದದ್ದು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈ ವರ್ಷ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯಲಿದ್ದು, ಕೇಂದ್ರ ಸರ್ಕಾರದ ಆಡಳಿತದಲ್ಲಿ ಇನ್ನಷ್ಟು ಚುರುಕುತನ ಮತ್ತು ದೃಢತೆ ತರಲು ಸಂಪುಟಕ್ಕೆ ಹೊಸ ಮುಖಗಳನ್ನು ಸೇರ್ಪಡೆ ಮಾಡಲು ಮೋದಿಯವರು ಉತ್ಸುಕರಾಗಿದ್ದಾರೆ ಎನ್ನಲಾಗುತ್ತಿದೆ.
ಪ್ರಮುಖ ನಾಲ್ಕು ಖಾತೆಗಳಾದ ಗೃಹ, ಹಣಕಾಸು, ರಕ್ಷಣಾ ಮತ್ತು ವಿದೇಶಾಂಗ ಸಚಿವಾಲಯ ಬದಲಾಗದ್ದಿದ್ದರೂ ಇತರ ಖಾತೆಗಳ ಸಚಿವರುಗಳ ಕಾರ್ಯನಿರ್ವಹಣೆ ಬಗ್ಗೆ ಪ್ರಧಾನಿಯವರಿಗೆ ತೃಪ್ತಿಯಾದಂತಿಲ್ಲ. ಹೀಗಾಗಿ ಕೆಲವು ಸಚಿವರು ತಮ್ಮ ಸ್ಥಾನ ಕಳೆದುಕೊಳ್ಳಬಹುದು ಇಲ್ಲವೇ ವರ್ಗಾವಣೆ ನೀಡಬಹುದು. ಕೆಲವು ಸಚಿವರಿಗೆ ಕಾರ್ಯನಿರ್ವಹಣೆಗೆ ಇನ್ನಷ್ಟು ಕಾಲಾವಕಾಶ ನೀಡಬಹುದು. ಉತ್ತಮವಾಗಿ ಕೆಲಸ ಮಾಡುವ ಸಚಿವರಿಗೆ ಹೆಚ್ಚಿನ ಜವಾಬ್ದಾರಿ ನೀಡಬಹುದು ಎಂದು ಎನ್ ಡಿಟಿವಿಗೆ ಮೂಲಗಳಿಂದ ತಿಳಿದುಬಂದಿದೆ.
ಬಿಹಾರ ರಾಜ್ಯದಲ್ಲಿ ಹೀನಾಯ ಸೋಲಿನಿಂದಾಗಿ ಸಚಿವರ ಸಂಖ್ಯೆಯನ್ನು ಮೋದಿಯವರು ಕುಗ್ಗಿಸುವ ಸಾಧ್ಯತೆಯಿದೆ. ಆದರೆ ಇವೆಲ್ಲವೂ ಅಮಿತ್ ಶಾ ಅವರು ರಾಷ್ಟ್ರಾಧ್ಯಕ್ಷರಾಗಿ ಮರು ಆಯ್ಕೆಗೊಂಡ ನಂತರ ಅವರು ಪದಾಧಿಕಾರಿಗಳನ್ನು ಪುನರ್ ಸಂಘಟಿಸಲಿದ್ದಾರೆ ಎಂದು ತಿಳಿದುಬಂದಿದೆ.
ಬಿಜೆಪಿ ಸದಸ್ಯರೆಲ್ಲರೂ ಸಹಮತದಿಂದ ಶಾ ಅವರನ್ನು ಪುನರಾಯ್ಕೆ ಮಾಡುವ ಸಾಧ್ಯತೆಯಿದೆ. ಅಮಿತ್ ಶಾ ಅವರ ಕಾರ್ಯ ವೈಖರಿ ಎಲ್ಲರಿಗೂ ಇಷ್ಟವಾಗಿದೆ. ಹಾಗಾಗಿ ಅವರೇ ರಾಷ್ಟ್ರಾಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗಿಯಾ ಹೇಳಿದ್ದು, ಅಮಿತ್ ಶಾ ಅವರ ಅಧಿಕಾರದಲ್ಲಿ ಬಿಜೆಪಿ ವಿಶ್ವದಲ್ಲಿಯೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದರು.
ಮುಂದಿನ ಮೂರು ವರ್ಷಗಳ ಅವಧಿಗೆ ಶಾ ಅವರೇ ರಾಷ್ಟ್ರಾಧ್ಯಕ್ಷರಾಗಿ ಮುಂದುವರಿಯಲಿರುವುದರಿಂದ ಅವರೇ 2019ರ ಲೋಕಸಭಾ ಚುನಾವಣೆಯನ್ನು ಮುನ್ನಡೆಸಲಿದ್ದಾರೆ. ಈ ವರ್ಷ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ ಮತ್ತು ಪಂಜಾಬ್ ಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಪಕ್ಷಕ್ಕೆ ಪರೀಕ್ಷೆಯ ಕಾಲವಾಗಿದೆ. ಈ ಎಲ್ಲಾ ರಾಜ್ಯಗಳಲ್ಲಿ ಇದುವರೆಗೆ ಬಿಜೆಪಿ ತನ್ನ ಪ್ರಾಬಲ್ಯ ಮೆರೆದಿಲ್ಲ. ಈ ಬಾರಿಯಾದರೂ ಗೆಲ್ಲಿಸುವುದು ಅದಕ್ಕೆ ಸವಾಲಾಗಿದೆ.
ಇನ್ನು 2017ರಲ್ಲಿ ಉತ್ತರ ಪ್ರದೇಶ ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿದೆ. 2014ರ ಲೋಕಸಭಾ ಚುನಾವಣೆಯಲ್ಲಿ 80 ಸೀಟುಗಳಲ್ಲಿ 72 ಸೀಟುಗಳನ್ನು ಗೆದ್ದಿದ್ದರೂ, ಸ್ಥಳೀಯ ಸಂಸ್ಥೆ ಮತ್ತು ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿಯ ಚಮತ್ಕಾರ ನಡೆದಿಲ್ಲ.