ನವದೆಹಲಿ/ಇಸ್ಲಾಮಾಬಾದ್: ಪಠಾಣ್‍ಕೋಟ್ ದಾಳಿ ಹಿನ್ನೆಲೆಯಲ್ಲಿ ಅನಿಶ್ಚಿತತೆಯಲ್ಲಿದ್ದ ಭಾರತ-ಪಾಕ್ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆ ಇದೇ ತಿಂಗಳಲ್ಲಿ ನಡೆಯುವ ಸಾಧ್ಯತೆ ದಟ್ಟವಾಗಿದೆ. ವಿದೇಶಾಂಗ ಕಾರ್ಯದರ್ಶಿ ಜೈಶಂಕರ್ ಅವರು ಪಾಕ್ ವಿದೇಶಾಂಗ ಕಾರ್ಯದರ್ಶಿ ಏಜಾಝ್ ಚೌಧರಿ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದ್ದು, ಜನವರಿ 20ರ ನಂತರ ಮಾತುಕತೆ ನಡೆಸುವ ಬಗ್ಗೆ ನಿರ್ಧರಿಸಿದ್ದಾರೆ ಎಂದು ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ. ಇದೇ ವೇಳೆ, ಮತ್ತೊಮ್ಮೆ ಭಾರತದ ವಿರುದ್ಧ ವಿಷ ಕಾರಿರುವ ಜೆಯುಡಿ ಉಗ್ರ, 26/11ರ ಮಾಸ್ಟರ್‍ಮೈಂಡ್ ಹಫೀಜ್ ಸಯೀದ್, 'ನಮ್ಮ ನೆರೆರಾಷ್ಟ್ರವು(ಭಾರತ) ಪಾಕಿಸ್ತಾನದ ಅಣ್ವಸ್ತ್ರಗಳ ವ್ಯಾಪ್ತಿಯಲ್ಲೇ ಇದೆ'' ಎನ್ನುವ ಮೂಲಕ ಭಾರತಕ್ಕೆ ಎಚ್ಚರಿಕೆ ನೀಡಿದ್ದಾನೆ. ಏತನ್ಮಧ್ಯೆ, ಭಾರತ-ಪಾಕ್ ಸಂಬಂಧ ಹಾಳುಮಾಡಲು ಉಗ್ರರು ಯತ್ನಿಸುತ್ತಿರುವುದು ಅಚ್ಚರಿಯೆನಲ್ಲ. ಇದಕ್ಕೆಲ್ಲ ಜಗ್ಗದೇ ಉಭಯ ರಾಷ್ಟ್ರಗಳು ಮಾತುಕತೆ ಮುಂದುವರಿಸಿ ಎಂದು ಅಮೆರಿಕ ಹೇಳಿದೆ. ಈ ನಡುವೆ, ಪೇಶಾವರ ಸೇನಾ ಶಾಲೆ ಮೇಲಿನ ದಾಳಿ ಬಳಿಕ ಪಾಕಿಸ್ತಾನವು ಒಟ್ಟು 332 ಮಂದಿ ಉಗ್ರರು ಮತ್ತು ಕ್ರಿಮಿನಲ್‍ಗಳನ್ನು ಗಲ್ಲಿಗೇರಿಸಿದೆ ಎಂದು ನ್ಯೂಸ್ ರಿಪಬ್ಲಿಕ್ ವರದಿ ಮಾಡಿದೆ.