ನವದೆಹಲಿ: ಆಮ್ ಆದ್ಮಿ ಪಕ್ಷದಿಂದ ಉಚ್ಚಾಟನೆಗೊಂಡಿರುವ ಯೋಗೇಂದ್ರ ಯಾದವ್ ಹಾಗೂ ಪ್ರಶಾಂತ್ ಭೂಷಣ್ ಹೊಸ ಪಕ್ಷವನ್ನು ಸ್ಥಾಪಿಸಲು ಚಿಂತನೆ ನಡೆಸಿದ್ದು 2017 ರಲ್ಲಿ ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.
ಆಪ್ ನಿಂದ ಉಚ್ಚಾಟನೆಯಾದ ನಂತರ ಸ್ವರಾಜ್ ಅಭಿಯಾನ ಎಂಬ ಸಂಘಟನೆಯನ್ನು ಕಟ್ಟಿರುವ ಯೋಗೇಂದ್ರ ಸಿಂಗ್ ಯಾದವ್, ಪ್ರಶಾಂತ್ ಭುಷಣ್ ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಪರ್ಯಾಯವಾಗಿ ಮತ್ತೊಂದು ರಾಜಕೀಯ ಪಕ್ಷ ಸ್ಥಾಪಿಸಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಇರಾದೆ ಹೊಂದಿದ್ದಾರೆ.
" ಶೀಘ್ರವೆ ರಾಜಕೀಯ ಪಕ್ಷವನ್ನು ಘೋಷಿಸುವ ಯೋಜನೆ ಇದೆ. ಆದರೆ ದಿನಾಂಕ ಇನ್ನೂ ನಿಗದಿಯಾಗಿಲ್ಲ, ಹಾಗೆಯೇ ಪಂಜಾಬ್ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದರ ಬಗ್ಗೆಯೂ ಗಂಭೀರ ಚಿಂತನೆ ನಡೆಸಿದ್ದೇವೆ ಎಂದು ಸ್ವರಾಜ್ ಅಭಿಯಾನದ ಮುಖಂಡರೋಬ್ಬರು ಹೇಳಿದ್ದಾರೆ.
ಪಂಜಾಬ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿರುವ ಸಂಗೀತಗಾರ ಭಾಯ್ ಬಲ್ದೀಪ್ ಅವರಿಗೆ ಬೆಂಬಲ ಘೋಷಿಸುತ್ತೇವೆ ಎಂದು ಸ್ವರಾಜ್ ಅಭಿಯಾನ್ ನ ಮುಖಂಡರು ಹೇಳಿದ್ದಾರೆ. ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವನ್ನು ಸಂಘಟಿಸಲು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಯೋಜನೆ ರೂಪಿಸುತ್ತಿರುವ ಬೆನ್ನಲ್ಲೇ ಆಪ್ ಗೆ ಪರ್ಯಾಯವಾಗಿ ಮತ್ತೊಂದು ಪಕ್ಷ ಅಸ್ತಿತ್ವಕ್ಕೆ ಬರುವ ಸಾಧ್ಯತೆಗಳು ದಟ್ಟವಾಗಿವೆ.