ನವದೆಹಲಿ: ಆತ್ಮಹತ್ಯೆಗೆ ಶರಣಾದ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ನೆನದು ಪ್ರಧಾನಿ ನರೇಂದ್ರ ಮೋದಿ ಭಾವುಕರಾಗಿದ್ದನ್ನು ಕಾಂಗ್ರೆಸ್ ಮೊಸಳೆ ಕಣ್ಣೀರು ಎಂದು ಟೀಕಿಸಿದೆ.
ರೋಹಿತ್ ಅವರನ್ನು ನೆನೆದು ಭಾವುಕರಾದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸಚಿವೆ ಸ್ಮೃತಿ ಇರಾನಿ ಹಾಗೂ ಬಂದಾರು ದತ್ತಾತ್ರೆಯ ಅವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಮಾತನಾಡಿಲ್ಲ ಎಂದು ಕಾಂಗ್ರೆಸ್ ವಕ್ತಾರ ರಣ್ ದೀಪ್ ಸುರ್ಜೆವಾಲಾ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾವು ಗೌರವಿಸುತ್ತೇವೆ. ಆದರೆ ಮೊಸಳೆ ಕಣ್ಣೀರು ಸುರಿಸುವುದರಿಂದ ರೋಹಿತ್ ವೇಮುಲಾ ಅವರನ್ನು ವಾಪಸ್ ತರಲು ಸಾಧ್ಯವಿಲ್ಲ ಅಥವಾ ಅವರ ಸಾವಿಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲ ಎಂದು ಸುರ್ಜೆವಾಲಾ ಹೇಳಿದ್ದಾರೆ.
ಪ್ರಕರಣದಲ್ಲಿ ಸ್ಮೃತಿ ಇರಾನಿ ಅವರು ಅಪರಾಧಿ ಎಂದಿರುವ ಕಾಂಗ್ರೆಸ್, ಸ್ಮೃತಿ ಇರಾನಿ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಏನನ್ನೂ ಮಾತಾಡದ ಮೂಲಕ ಪ್ರಧಾನಿ ದೇಶದ ಜನತೆಯನ್ನು ನಿರಾಶೆಗೊಳಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.