ಭುವನೇಶ್ವರ: ಇರಾಕಿ ಪ್ರಜೆಗಳೆಂದು ಗುರುತು ಹೇಳಿದ ನಾಲ್ವರು ಶಂಕಿತ ಉಗ್ರರು ಏಕಾಏಕಿ ಹೊಟೇಲ್ ನಿಂದ ನಾಪತ್ತೆಯಾಗಿದ್ದು, ಅವರಿಗಾಗಿ ಒಡಿಶಾ ಪೊಲೀಸರು ತೀರ್ವ ಶೋಧ ನಡೆಸುತ್ತಿದ್ದಾರೆ.
ಕಳೆದ ರಾತ್ರಿ ಭುವನೇಶ್ವರದ ಹೋಟೆಲ್ವೊಂದಕ್ಕೆ ಆಗಮಿಸಿದ ನಾಲ್ವರನ್ನು ಹೊಟೇಲ್ ಮ್ಯಾನೇಜರ್ ತಮ್ಮ ಗುರುತಿನ ಚೀಟಿ ನೀಡುವಂತೆ ಕೇಳಿದ ತಕ್ಷಣ ಅವರು ಸ್ಥಳದಿಂದ ಪರಾರಿಯಾಗಿರುವುದರಿಂದ ರಾಜ್ಯದಲ್ಲಿ ಆತಂಕ ಮನೆ ಮಾಡಿದ್ದು, ಹೈಅಲರ್ಟ್ ಘೋಷಿಸಲಾಗಿದೆ.
ಸುಮಾರು 6.5 ಅಡಿ ಎತ್ತರವಿದ್ದ ಅವರು ಹಿಂದಿ ಮತ್ತು ಇಂಗ್ಲಿಷ್ ಭಾಷೆ ಮಾತನಾಡುತ್ತಿದ್ದು ದೆಹಲಿ ರೆಜಿಸ್ಟ್ರೇಷನ್ ನಂಬರ್ ಕಾರಿನಲ್ಲಿ ಹೊಟೇಲ್ ಗೆ ಬಂದಿದ್ದರು. ಈ ವೇಳೆ ಹೊಟೇಲ್ ಮ್ಯಾನೇಜರ್ ಅವರಿಗೆ ಗುರುತಿನ ಚೀಟಿ ನೀಡುವಂತೆ ತಿಳಿಸಿದ್ದರು. ಬಳಿಕ ಅವರ ಮೇಲೆ ಅನುಮಾನಗೊಂಡ ಮ್ಯಾನೇಜರ್ ಪೊಲೀಸರಿಗೆ ವಿಷಯ ಮುಟ್ಟಿಸಿದರು. ಆದರೆ ಪೊಲೀಸರು ಹೊಟೇಲ್ ಗೆ ಬರುವ ವೇಳೆಗೆ ಶಂಕಿತರು ಹೊಟೇಲ್ನಿಂದ ಪರಾರಿಯಾಗಿದ್ದಾರೆ.
ಶಂಕಿತರು ತಂದಿದ್ದ ಕಾರಿನ ನಂಬರ್ ನಕಲಿಯಾಗಿದ್ದು, ದೆಹಲಿಯಲ್ಲಿ ಕಾರಿನ ನಂಬರ್ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ. ಶಂಕಿತರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಒಬ್ಬ ಶಂಕಿತನ ಚಿತ್ರ ಮತ್ತು ಕಾರಿನ ಚಿತ್ರ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.