ನವದೆಹಲಿ: ರಾಜಕೀಯ ಅಸ್ಥಿರತೆ ಹಿನ್ನೆಲೆಯಲ್ಲಿ ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತ ಹೇರಿರುವ ಕೇಂದ್ರ ಸರ್ಕಾರಕ್ಕೆ ಬುಧವಾರ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ.
ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದ್ದ ಕೇಂದ್ರ ಸಚಿವ ಸಂಪುಟದ ನಿರ್ಧಾರ ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ರಾಷ್ಟ್ರಪತಿ ಆಡಳಿತಕ್ಕೆ ಅಷ್ಟೊಂದು ಆತುರ ಏಕೆ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ. ಅಲ್ಲದೆ ಈ ಸಂಬಂಧ ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿರುವ ಕೋರ್ಟ್ ಜನವರಿ 29ರೊಳಗೆ ಸಂವಿಧಾನಿಕ ಬಿಕ್ಕಟ್ಟಿನ ಬಗ್ಗೆ ವರದಿ ನೀಡುವಂತೆ ಸೂಚಿಸಿ, ವಿಚಾರಣೆಯನ್ನು ಫೆಬ್ರುವರಿ 1ಕ್ಕೆ ಮುಂದೂಡಿದೆ.
ಇದಕ್ಕೂ ಮುನ್ನ ಯಾವ ಆಧಾರದ ಮೇಲೆ ರಾಷ್ಟ್ರಪತಿ ಆಡಳಿತ ಹೇರಲಾಗಿದೆ ಎಂಬುದರ ಬಗ್ಗೆ 15 ನಿಮಿಷಗಳಲ್ಲಿ ವರದಿ ನೀಡುವಂತೆ ಅರುಣಾಚಲ ಪ್ರದೇಶ ರಾಜ್ಯಪಾಲರಿಗೆ ಸೂಚಿಸಿತ್ತು.
ಕೇಂದ್ರ ಸಚಿವ ಸಂಪುಟ ರಾಷ್ಟ್ರಪತಿ ಆಡಳಿತಕ್ಕೆ ಮಾಡಿದ್ದ ಶಿಫಾರಸಿಗೆ ನಿನ್ನೆಯಷ್ಟೇ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಸಹಿ ಹಾಕಿದ್ದರು.