ಜಮ್ಮು: ಜು.4 ರಂದು 1,414 ಯಾತ್ರಾರ್ಥಿಗಳ ಮತ್ತೊಂದು ತಂಡ ಅಮರನಾಥ ಯಾತ್ರೆಗೆ ಹೊರಟಿದ್ದು ಈ ಮೂಲಕ ಎರಡು ದಿನಗಳಲ್ಲಿ 24 ಸಾವಿರ ಭಕ್ತಾದಿಗಳು ಅಮರನಾಥ ಯಾತ್ರೆ ಕೈಗೊಂಡಿದ್ದಾರೆ.
ಭಗವತಿ ನಗರ್ ಯಾತ್ರಿ ನಿವಾಸದಿಂದ 1,414 ಯಾತ್ರಿಕರು ಬೆಳಿಗ್ಗೆ 4:40 ಕ್ಕೆ ಅಮರನಾಥ ಯಾತ್ರೆಗೆ ಹೊರಟಿದ್ದಾರೆ. ಯಾತ್ರಾರ್ಥಿಗಳಿಗೆ ಭದ್ರತಾ ಪಡೆಗಳು ರಕ್ಷಣೆ ನೀಡಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ
ನೀಡಿದ್ದಾರೆ. ಇನ್ನು ಯಾತ್ರಾರ್ಥಿಗಳಿಗೆ ಮುನ್ನೆಚ್ಚರಿಕೆ ನೀಡಲು ಹವಾಮಾನ ಇಲಾಖೆ ನಿರಂತರವಾಗಿ ಮಾಹಿತಿ ನೀಡುತ್ತಿದ್ದು, ಜು.4 ರಂದು ಮಧ್ಯಾಹ್ನದ ವೇಳೆಗೆ ಸೋನಾಮಾರ್ಗ್ ನಲ್ಲಿರುವ ಪವಿತ್ರ ಗುಹೆಯ ಪ್ರದೇಶದಲ್ಲಿ ಹಾಗೂ ಪಹಲ್ಗಾಮ್ ಪವಿತ್ರ ಗುಹೆಯ ಪ್ರದೇಶದಲ್ಲಿ ಮಳೆಯಾಗುವ ಮುನ್ಸೂಚನೆ ನೀಡಿದೆ.
ಅಮರನಾಥ ದೇವಾಲಯ ಆಡಳಿತ ಮಂಡಳಿಯ ಮಾಹಿತಿಯ ಪ್ರಕಾರ ಈ ವರೆಗೂ 24 ಸಾವಿರ ಯಾತ್ರಾರ್ಥಿಗಳು ಅಮರನಾಥದಲ್ಲಿ ಹಿಮಲಿಂಗದ ದರ್ಶನ ಪಡೆದಿದ್ದಾರೆ. ಜು.2 ರಂದು ಪ್ರಾರಂಭವಾದ ಅಮರನಾಥ ಯಾತ್ರೆ 48 ದಿನಗಳು ನಡೆಯಲಿದ್ದು ಆಗಸ್ಟ್ 17 ರಂದು ಮುಕ್ತಾಯಗೊಳ್ಳಲಿದೆ.