ಸ್ವಾತಿ ಮತ್ತು ರಾಮ್ ಕುಮಾರ್(ಸಂಗ್ರಹ ಚಿತ್ರ)
ಚೆನ್ನೈ/ ತಿರುನಲ್ವೇಲಿ: ತನ್ನ ಸೌಂದರ್ಯದ ಬಗ್ಗೆ ಅವಮಾನ ಮಾಡಿದ್ದನ್ನು ಸಹಿಸದೆ ಸ್ವಾತಿಯನ್ನು ಕೊಲೆ ಮಾಡಿರುವುದಾಗಿ ಆರೋಪಿ ರಾಮ್ ಕುಮಾರ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಚೆನ್ನೈ ಮೂಲದ ಟೆಕ್ಕಿ ಸ್ವಾತಿ ಕೊಲೆ ಆರೋಪಿ ರಾಮ್ ಕುಮಾರ್ ನನ್ನು ಬಂಧಿಸಿದ ಎರಡು ದಿನಗಳ ನಂತರ ನಿನ್ನೆ ತಿರುನಲ್ವೇಲಿಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ರಾಮ್ ಕುಮಾರ್ ಹೇಳಿಕೆಯನ್ನು ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಎಂ.ರಾಮದಾಸ್ ದಾಖಲಿಸಿಕೊಂಡರು.
ರಾಮ್ ಕುಮಾರ್ ಸ್ವಾತಿಗೆ ಮೂರು ಬಾರಿ ತನ್ನನ್ನು ಪ್ರೀತಿಸುವಂತೆ ಕೇಳಿಕೊಂಡಿದ್ದನಂತೆ. ನುಂಗಂಬಕ್ಕಮ್ ರೈಲ್ವೆ ನಿಲ್ದಾಣದಲ್ಲಿ ಒಮ್ಮೆ ತನ್ನ ಪ್ರೀತಿಯನ್ನು ರಾಂಕುಮಾರ್ ತೋಡಿಕೊಂಡಾಗ ಸ್ವಾತಿ ಬೇರೆ ಪ್ರಯಾಣಿಕರ ಎದುರೇ ಅವನ ಸೌಂದರ್ಯದ ಬಗ್ಗೆ ಕಠೋರ ಮಾತುಗಳಿಂದ ಅವಮಾನಿಸಿದ್ದಳಂತೆ. ಅದಕ್ಕೂ ಮುನ್ನ ಎರಡು ಬಾರಿ ಕೂಡ ನೀನು ನೋಡಲು ಕುರೂಪನಾಗಿದ್ದೀಯಾ ಎಂಬಂಥ ರೀತಿಯಲ್ಲಿ ಮಾತನಾಡಿದ್ದಳೆಂದು ಪೊಲೀಸರಿಗೆ ರಾಂಕುಮಾರ್ ಹೇಳಿದ್ದಾನೆ.
ಈ ಘಟನೆಗಳು ಸ್ವಾತಿಯನ್ನು ಕೊಲ್ಲುವಂತೆ ತನ್ನನ್ನು ಪ್ರೇರೇಪಿಸಿದವು ಎಂದು ರಾಮ್ ಕುಮಾರ್ ತಪ್ಪೊಪ್ಪಿಕೊಂಡಿದ್ದಾನೆ. ಆಕೆಯ ಮೇಲೆ ದಾಳಿ ನಡೆಸಬೇಕೆಂದು ಮೊದಲೇ ಸಿದ್ಧತೆ ಮಾಡಿಕೊಂಡಿದ್ದ ರಾಂಕುಮಾರ್ ತಿರುನಲ್ವೇಲಿಯ ತನ್ನ ನೆರೆಯ ತೋಟದಿಂದ ಕತ್ತಿಯನ್ನು ಪಡೆದುಕೊಂಡಿದ್ದನು. ಸ್ವಾತಿ ಎಷ್ಟು ಹೊತ್ತಿಗೆ ಹೋಗುತ್ತಾಳೆ, ಎಲ್ಲಿಗೆ ಹೋಗುತ್ತಾಳೆ, ಎಷ್ಟು ಹೊತ್ತಿಗೆ ಬರುತ್ತಾಳೆ ಎಂಬುದನ್ನೆಲ್ಲ ಚೆನ್ನಾಗಿ ತಿಳಿದುಕೊಂಡಿದ್ ರಾಮ್, ಸಮಯಕ್ಕಾಗಿ ಹೊಂಚುಹಾಕುತ್ತಿದ್ದ.
ನ್ಯಾಯಾಧೀಶರು ಆಸ್ಪತ್ರೆಯಲ್ಲಿ ನಿನ್ನೆ ಸುಮಾರು 30 ನಿಮಿಷಗಳ ಕಾಲ ರಾಂಕುಮಾರ್ ಹೇಳಿಕೆಯನ್ನು ದಾಖಲಿಸಿಕೊಂಡರು. ಪ್ರಯಾಣಕ್ಕೆ ಆತನ ದೇಹ ಸದೃಢವಾಗಿದೆ ಎಂದು ವೈದ್ಯರು ದೃಢಪಡಿಸಿದ ಮೇಲೆ ಅವನನ್ನು ಆಂಬ್ಯುಲೆನ್ಸ್ ನಲ್ಲಿ ಇಂದು ಚೆನ್ನೈಗೆ ಕೋರ್ಟ್ ಗೆ ಹಾಜರುಪಡಿಸಲು ಕೆರತರಲಾಗುತ್ತಿದೆ. ಜೊತೆಗೆ ಮೂವರು ವೈದ್ಯರು ಮತ್ತು ಪೊಲೀಸರ ತಂಡವಿದೆ.
ಆಂಬ್ಯುಲೆನ್ಸ್ ನಲ್ಲಿ ಜೀವ ರಕ್ಷಕ ವ್ಯವಸ್ಥೆ ಅಳವಡಿಸಲಾಗಿದೆ. ಇಎನ್ ಟಿ ಮತ್ತು ಅನಸ್ತೇಷಿಯಾ ತಜ್ಞರು ಕೂಡ ಜೊತೆಗಿದ್ದಾರೆ ಎಂದು ತಿರುನಲ್ವೇಲಿ ಆಸ್ಪತ್ರೆಯ ಡಾ. ಸಿತಿ ಅತಿಯಾ ಮುನವರಾ ತಿಳಿಸಿದ್ದಾರೆ. ಆತನ ದೇಹಸ್ಥಿತಿ ಈಗ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಆದರೆ ಆತ ಇನ್ನೂ ದ್ರವ ಆಹಾರ ತಿನ್ನುತ್ತಿದ್ದಾನೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಇಂದು ರಾಮ್ ಕುಮಾರ್ ನನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರುಪಡಿಸಿ ಪುಳಲ್ ಜೈಲಿಗೆ ಕಳುಹಿಸಲಾಗುತ್ತದೆ. ಜೈಲಿನ ವೈದ್ಯರ ಅಭಿಪ್ರಾಯದ ಮೇರೆಗೆ ಆತನ ವೈದ್ಯಕೀಯ ಚಿಕಿತ್ಸೆ ನಡೆಸಲಾಗುತ್ತದೆ ಎಂದು ಕಾರಾಗೃಹದ ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos