ಚೆನ್ನೈ: ಟೆಕ್ಕಿ ಸ್ವಾತಿ ಕೊಲೆ ಪ್ರಕರಣ ಸಂಬಂಧ ಕಳೆದ ವಾರ ಬಂಧನಕ್ಕೊಳಗಾಗಿದ್ದ ಆರೋಪಿ ರಾಮ್ ಕುಮಾರ್ ನನ್ನು ಸೋಮವಾರ ಚೆನ್ನೈಗೆ ಕರೆತರಾಗಿದ್ದು, ನ್ಯಾಯಾಧೀಶರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕೊಲೆ ಪ್ರಕರಣದ ನಂತರ ಆತ್ಮಹತ್ಯೆಗೆ ಯತ್ನಿಸಿ ತಿರುನೆಲ್ವಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಆರೋಪಿ ರಾಮ್ ಕುಮಾರ್ ನನ್ನು ಪೊಲೀಸರು ಇಂದು ಚೆನ್ನೈಗೆ ಕರೆತಂದು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ವಿಚಾರಣೆ ನಡೆಸಿದ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಎಸ್ ಗೋಪಿನಾಥ್ ಅವರು, ಆರೋಪಿಯನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
24 ವರ್ಷದ ರಾಮ್ ಕುಮಾರ್ ನನ್ನು ಆಂಬುಲೆನ್ಸ್ ಮೂಲಕ ತಿರುನಲ್ವೇಲಿಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಿಂದ ಚೆನ್ನೈನ ರಾಯಪೇಟ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಜೂನ್ 24ರಂದು ನುಂಗಮ್ ಬಾಕಮ್ ರೇಲ್ವೆ ನಿಲ್ದಾಣದಲ್ಲಿ ನಡೆದ ಸ್ವಾತಿ ಕೊಲೆ ಪ್ರಕರಣ ಸಂಬಂಧ ಜುಲೈ 1ರಂದು ಆರೋಪಿ ರಾಮ್ ಕುಮಾರ್ ನನ್ನು ತಿರುನೆಲ್ವಲ್ಲಿ ಜಿಲ್ಲೆಯ ಟಿ ಮೀನಾಕ್ಷಿಪುರಂನಲ್ಲಿ ಪೊಲೀಸರು ಬಂಧಿಸಿದ್ದರು.